ಹಂಗಿಸಿದವರಿಗೆ ಸ್ನೇಹ, ವಿಕೆಟ್ ಮೂಲಕ ಉತ್ತರ: ಆಮಿರ್

Update: 2016-01-02 11:49 GMT


  ಲಾಹೋರ್, ಜ.2: ‘‘ಅಭಿಮಾನಿಗಳು ನನ್ನನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಇದೆ. ಆದರೆ ಕೆಲವು ಮಂದಿ ನನ್ನನ್ನು ಟೀಕಿಸಿದ್ದಾರೆ. ನಾನು ಅವರನ್ನು ಪ್ರೀತಿಸುವ ಮೂಲಕ ಉತ್ತಮ ಪ್ರದರ್ಶನದೊಂದಿಗೆ ವಿಕೆಟ್‌ಗಳನ್ನು ಉಡಾಯಿಸುವ ಮೂಲಕ ಉತ್ತರ ನೀಡುವೆ ’’ಎಂದು ಪಾಕ್‌ನ ವೇಗದ ಬೌಲರ್ ಮುಹಮ್ಮದ್ ಆಮಿರ್ ಹೇಳಿದ್ದಾರೆ.
 
 ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಐದು ವರ್ಷಗಳ ನಿಷೇಧದ ಸಜೆಯನ್ನು ಅನುಭವಿಸಿ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ವಾಪಸಾಗುತ್ತಿರುವ ಆಮಿರ್ ನ್ಯೂಝಿಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗೆ ಶುಕ್ರವಾರ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಭಿಮಾನಿಗಳು ನನ್ನನ್ನು ದೂರ ಮಾಡಿಲ್ಲ. ಬಹುತೇಕ ಮಂದಿ ನನ್ನ ಪರ ಇದ್ದಾರೆ ಎಂದು ಹೇಳಿದರು.
  ಪಾಕ್ ತಂಡದ ಹಿರಿಯ ಆಟಗಾರರು ತನ್ನನ್ನು ಟೀಕಿಸಿದ ಹಿನ್ನೆಲೆಯಲ್ಲಿ ಬಹಳಷ್ಟು ನೊಂದುಕೊಂಡಿದ್ದ ಆಮಿರ್ ಎದುರಾಳಿ ತಂಡದ ವಿಕೆಟ್ ಪಡೆದು ತನ್ನನ್ನು ಟೀಕಿಸಿದವರ ಮನ ಗೆಲ್ಲುವುದಾಗಿ ಆಮಿರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
    
ಐಸಿಸಿ ವಿಧಿಸಿದ್ದ ನಿಷೇಧದ ಅವಧಿ ಮುಗಿದು ನಾಲ್ಕು ತಿಂಗಳ ಬಳಿಕ 23ರ ಹರೆಯದ ಎಡಗೈ ವೇಗಿ ಆಮಿರ್ ಪಾಕ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ವಾರ ಅವರು ತರಬೇತಿ ಶಿಬಿರಕ್ಕೆ ತೆರಳಿದಾಗ, ಅವರಿಗೆ ಅವಕಾಶ ನೀಡಿದ್ದನ್ನು ವಿರೋಧಿಸಿ ಮುಹಮ್ಮದ್ ಹಫೀಝ್ ಮತ್ತು ಅಝರ್ ಅಲಿ ಶಿಬಿರವನ್ನು ಬಹಿಷ್ಕರಿಸಿ ಹೊರ ನಡೆದಿದ್ದರು. ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗುವ ಮೊದಲು ಆಮಿರ್ 14 ಟೆಸ್ಟ್‌ಗಳಲ್ಲಿ 51 ವಿಕೆಟ್, 15 ಏಕದಿನ ಪಂದ್ಯಗಳಲ್ಲಿ 25 ವಿಕೆಟ್ ಮತ್ತು 18 ಟ್ವೆಂಟಿ-20 ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News