ಮುಶ್ತಾಕ್ ಅಲಿ ಟ್ವೆಂಟಿ-20 ಟೂರ್ನಿ: ಯುವಿ, ವೀರೂ ಫ್ಲಾಪ್, ಕರ್ನಾಟಕಕ್ಕೆ ಕಹಿ

Update: 2016-01-02 18:10 GMT

ಹೊಸದಿಲ್ಲಿ, ಜ.2: ಸೈಯದ್ ಮುಶ್ತಾಕ್ ಅಲಿ ಟ್ರೋಫಿಯ ಮೊದಲ ದಿನವಾದ ಶನಿವಾರ ಕೆಲವು ಅಚ್ಚರಿ ಹಾಗೂ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ವೀರೇಂದ್ರ ಸೆಹ್ವಾಗ್ ಹಾಗೂ ಯುವರಾಜ್ ಸಿಂಗ್ ಫ್ಲಾಪ್ ಪ್ರದರ್ಶನ ನೀಡಿದರು. ವೃದ್ಧಿಮಾನ್ ಸಹಾ ಹಾಗೂ ಮುಹಮ್ಮದ್ ಶಮಿ ಬಂಗಾಳದ ಗೆಲುವಿಗೆ ಕಾಣಿಕೆ ನೀಡಿದರು. ಕರ್ನಾಟಕಕ್ಕೆ ಸರ್ವಿಸಸ್ ಶಾಕ್: ಸರ್ವಿಸಸ್ ತಂಡದ ಆಲ್‌ರೌಂಡ್ ಪ್ರದರ್ಶನಕ್ಕೆ ತತ್ತರಿಸಿದ ಕರ್ನಾಟಕ ತಂಡ 3 ವಿಕೆಟ್‌ಗಳಿಂದ ಶರಣಾಗಿ ವರ್ಷಾರಂಭದಲ್ಲೇ ಕಹಿ ಉಂಡಿದೆ. ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಗೆಲುವಿಗೆ 122 ರನ್ ಬೆನ್ನಟ್ಟಿದ ಸರ್ವಿಸಸ್ ತಂಡ 6 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ರನ್ ದಾಖಲಿಸಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 121 ರನ್ ಗಳಿಸಿತು. ನಾಯಕ ವಿನಯಕುಮಾರ್(38 ರನ್) ಅಗ್ರ ಸ್ಕೋರರ್ ಎನಿಸಿಕೊಂಡರು. ರಾಜ್(3-19) ನೇತೃತ್ವದ ಸರ್ವಿಸಸ್ ತಂಡ ಶಿಸ್ತುಬದ್ಧ ಬೌಲಿಂಗ್‌ನ ಮೂಲಕ ಕರ್ನಾಟಕವನ್ನು ಕಟ್ಟಿಹಾಕಿತು.

ಸೆಹ್ವಾಗ್ ಫ್ಲಾಪ್, ಹರ್ಯಾಣಕ್ಕೆ ಸೋಲು: ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ 7 ವಿಕೆಟ್ ಹಂಚಿಕೊಂಡ ವೇಗದ ಬೌಲರ್ ಆ್ಯಂಟನಿ ಹಾಗೂ ಲೆಗ್ ಸ್ಪಿನ್ನರ್ ಎಂ. ಅಶ್ವಿನ್ ಹರ್ಯಾಣದ ವಿರುದ್ಧ ತಮಿಳುನಾಡಿಗೆ 9 ವಿಕೆಟ್ ಗೆಲುವು ತಂದುಕೊಟ್ಟರು.

ಆರ್. ಸತೀಶ್‌ಗೆ ವಿಕೆಟ್ ಒಪ್ಪಿಸಿದ ಸೆಹ್ವಾಗ್ ಕೇವಲ 3 ರನ್ ಗಳಿಸಿದರು. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಸೆಹ್ವಾಗ್ ಮುಂಬರುವ ಮಾಸ್ಟರ್ಸ್‌ ಚಾಂಪಿಯನ್ಸ್ ಲೀಗ್‌ನಲ್ಲಿ ಸಜ್ಜಾಗಲು ದೇಶೀಯ ಟ್ವೆಂಟಿ-20 ಟೂರ್ನಿಯಲ್ಲಿ ಆಡುತ್ತಿದ್ದಾರೆ.

ಈಶ್ವರ್ ಪಾಂಡೆಗೆ ಹ್ಯಾಟ್ರಿಕ್: ಪಾಂಡೆ ಹ್ಯಾಟ್ರಿಕ್(4-20) ಸಾಹಸದ ನೆರವಿನಿಂದ ಮಧ್ಯಪ್ರದೇಶ ತಂಡ ಆಂಧ್ರಪ್ರದೇಶವನ್ನು 5 ವಿಕೆಟ್‌ಗಳಿಂದ ಮಣಿಸಿತು.

ಇನಿಂಗ್ಸ್‌ನ 3ನೆ ಓವರ್‌ನಲ್ಲಿ ಎಸ್. ಭರತ್, ಪ್ರಶಾಂತ್ ಕುಮಾರ್ ಹಾಗೂ ಎಜಿ ಪ್ರದೀಪ್ ವಿಕೆಟ್‌ನ್ನು ಕಬಳಿಸಿದ ಪಾಂಡೆ ಹ್ಯಾಟ್ರಿಕ್ ಪೂರೈಸಿದರು. ಮುಂದಿನ ಓವರ್‌ನಲ್ಲಿ 4ನೆ ವಿಕೆಟ್ ಕಬಳಿಸಿದರು. ಪಾಂಡೆ ದಾಳಿಗೆ ತತ್ತರಿಸಿದ ಆಂಧ್ರ 21 ರನ್‌ಗೆ 4 ವಿಕೆಟ್ ಕಳೆದುಕೊಂಡಿತು.

   ಚಾವ್ಲಾ ಹ್ಯಾಟ್ರಿಕ್,ಯುಪಿಗೆ ಜಯ: ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾರ ಹ್ಯಾಟ್ರಿಕ್ ವಿಕೆಟ್ ನೆರವಿನಿಂದ ಉತ್ತರ ಪ್ರದೇಶ ತಂಡ ಮಹಾರಾಷ್ಟ್ರದ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿತು. 8ನೆ ಓವರ್‌ನ ಅಂತಿಮ 2 ಎಸೆತಗಳಲ್ಲಿ ಶ್ರೀಕಾಂತ್ ಹಾಗೂ ರಾಹುಲ್ ತ್ರಿಪಾಠಿ ವಿಕೆಟ್ ಕಬಳಿಸಿದ ಚಾವ್ಲಾ 11ನೆ ಓವರ್‌ನ ಮೊದಲ ಎಸೆತದಲ್ಲಿ ಮತ್ತೊಂದು ವಿಕೆಟ್ ಕಬಳಿಸಿ ಹ್ಯಾಟ್ರಿಕ್ ಪೂರೈಸಿದರು.

ಮುಂಬೈಗೆ ಸುಲಭ ಜಯ: ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಮುಂಬೈ ತಂಡ ಒಡಿಶಾ ವಿರುದ್ಧ 6 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಒಡಿಶಾ 17.4 ಓವರ್‌ಗಳಲ್ಲಿ 91 ರನ್ ಗಳಿಸಿತು. ಮುಂಬೈ 15.5 ಓವರ್‌ಗಲ್ಲಿ ಗೆಲುವಿನ ಗುರಿ ತಲುಪಿತು. ಬಂಗಾಳಕ್ಕೆ ಶಮಿ, ಸಹಾ ಆಸರೆ: ವೃದ್ಧಿಮಾನ್ ಸಹಾ(81 ರನ್) ಹಾಗೂ ಮುಹಮ್ಮದ್ ಶಮಿ(3-18) ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಬಂಗಾಳ ತಂಡ ಹೈದರಾಬಾದ್ ವಿರುದ್ಧ 61 ರನ್ ಗೆಲುವು ಸಾಧಿಸಿತು. ಬಂಗಾಳ 4ಕ್ಕೆ 185 ರನ್ ಗಳಿಸಿತು. ಇದಕ್ಕುತ್ತರವಾಗಿ ಹೈದರಾಬಾದ್ 16.2 ಓವರ್‌ಗಳಲ್ಲಿ 124 ರನ್‌ಗೆ ಆಲೌಟಾಯಿತು. ಶಮಿಗೆ ಪ್ರಗ್ಯಾನ್ ಓಜಾ(3-23) ಸಾಥ್ ನೀಡಿದರು.

 ಗರಿಷ್ಠ ಸ್ಕೋರ್ ಬೆನ್ನಟ್ಟಿದ ದಿಲ್ಲಿ: ದಾಂಡಿಗರ ಸಂಘಟಿತ ಪ್ರದರ್ಶನದ ಸಹಾಯದಿಂದ ದಿಲ್ಲಿ ತಂಡ 211 ರನ್ ಗುರಿಯನ್ನು ಬೆನ್ನಟ್ಟಿತು. ರೈಲ್ವೇಸ್ ತಂಡ ಸೌರವ್ ಶತಕದ(108ರನ್)ನೆರವಿನಿಂದ 2ಕ್ಕೆ 210 ರನ್ ಗಳಿಸಿತು. ದಿಲ್ಲಿ 19.2 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು.

ಯುವಿ ಫ್ಲಾಪ್, ಪಂಜಾಬ್‌ಗೆ ಸೋಲು: ಯುವರಾಜ್ ಕಳಪೆ ಪ್ರದರ್ಶನದಿಂದಾಗಿ ಪಂಜಾಬ್ ತಂಡ ರಾಜಸ್ಥಾನದ ವಿರುದ್ಧ 4 ವಿಕೆಟ್ ಸೋಲುಂಡಿತು. ಬಿ ಗುಂಪಿನ ಪಂದ್ಯದಲ್ಲಿ ಪಂಜಾಬ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 130 ರನ್ ಗಳಿಸಿತು. ಮನ್‌ದೀಪ್(76ರನ್) ಅಗ್ರ ಸ್ಕೋರರ್ ಎನಿಸಿಕೊಂಡರು. ಸಂಕ್ಷಿಪ್ತ ಸ್ಕೋರ್

ಕರ್ನಾಟಕ: 20 ಓವರ್‌ಗಳಲ್ಲಿ 121/9

(ವಿನಯಕುಮಾರ್ 38, ಉತ್ತಪ್ಪ 22, ರಾಜ್ 3-19, ದೀಪಕ್ ರಾಜ್ 2-21)

ಸರ್ವಿಸಸ್: 19 ಓವರ್‌ಗಳಲ್ಲಿ 122/7

(ಗುಪ್ತಾ 27, ಯಶ್ಪಾಲ್ ಸಿಂಗ್ 25, ಸುಮಿತ್ ಸಿಂಗ್ 20, ಕೆಸಿ ಕಾರ್ಯಪ್ಪ 2-20)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News