ಮುಶ್ತಾಕ್ ಅಲಿ ಪಂದ್ಯದಲ್ಲಿ ಪಠಾಣ್ ಪರಾಕ್ರಮ

Update: 2016-01-02 19:11 GMT


   ಬಿಸಿಸಿಐಗೆ ತನ್ನ ಸಾಮರ್ಥ್ಯವನ್ನು ನೆನಪು ಮಾಡಿದ ಇರ್ಫಾನ್
 ವಡೋಧರ, ಜ.2: ಇಲ್ಲಿ ನಡೆದ ಮುಶ್ತಾಕ್ ಅಲಿ ಟೂರ್ನಿಯ ಟ್ವೆಂಟಿ-20 ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಆಲ್‌ರೌಂಡರ್ ಇರ್ಫಾನ್ ಪಠಾಣ್ 13ಕ್ಕೆ 5 ವಿಕೆಟ್ ಉಡಾಯಿಸಿ ಬರೋಡ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದಾರೆ.
ಇಲ್ಲಿನ ರಿಲಯನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಸ್ಸಾಂನ್ನು 20 ಓವರ್‌ಗಳಲ್ಲಿ 116ಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪಠಾಣ್ ಬರೋಡಕ್ಕೆ 49 ರನ್‌ಗಳ ಗೆಲುವಿಗೆ ನೆರವಾದರು.
 ಪಠಾಣ್ ಅವರ ಇಂದಿನ ಪ್ರದರ್ಶನ 4-0-13-5.
2007ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಮಹೆಂದ್ರ ಸಿಂಗ್ ಧೋನಿ ನಾಯಕತ್ವದ ಟೀಮ್ ಇಂಡಿಯಾ ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಪಠಾಣ್ ಕೊಡುಗೆ ದೊಡ್ಡದು. ಅವರು ಫೈನಲ್‌ನಲ್ಲಿ 16ಕ್ಕೆ 3 ವಿಕೆಟ್ ಉಡಾಯಿಸಿ ಪಂದ್ರಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.
  ಕಪಿಲ್ ನಿರ್ಗಮನದ ಬಳಿಕ ಟೀಮ್ ಇಂಡಿಯಾದಲ್ಲಿ ಖಾಲಿಯಾಗಿದ್ದ ವೇಗದ ಬೌಲರ್ ಕಮ್ ಆಲ್‌ರೌಂಡರ್ ಸ್ಥಾನವನ್ನು ಪಠಾಣ್ ತುಂಬಿದ್ದರು.ಪಾಕಿಸ್ತಾನದ ಗ್ರೇಟ್ ವಸಿಂ ಅಕ್ರಮ್ ಅವರು ಪಠಾಣ್‌ರ ಬೌಲಿಂಗ್‌ನ್ನು ಶ್ಲಾಘಿಸಿದ್ದರು. ಆಲ್‌ರೌಂಡರ್ ಆಗಿ ಮಿಂಚುತ್ತಿದ್ದ ಪಠಾಣ್ ಕಳೆದ ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿದ್ದಾರೆ. ಅವರ ಕ್ರಿಕೆಟ್ ಕೇವಲ ದೇಶೀಯ ಟೂರ್ನಮೆಂಟ್‌ಗಳಿಗಷ್ಟೇ ಸೀಮಿತವಾಗಿದೆ.
  ಪಠಾಣ್ ದೇಶಿಯ ಟೂರ್ನಿಗಳಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡುತ್ತಿದ್ದರೂ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೆ ದಾರಿ ಬಂದ್ ಆಗಿದೆ. ಆಗಾಗ ಫಿಟ್‌ನೆಸ್, ಗಾಯದ ಸಮಸ್ಯೆ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನ್ನು ಕ್ರಿಕೆಟ್ ಬದುಕನ್ನು ಕಿತ್ತುಕೊಂಡಿದೆ.
ಪಠಾಣ್ ಟೆಸ್ಟ್‌ನಲ್ಲೂ ಆರಂಭದಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದ್ದರು.2003ರಲ್ಲಿ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದ್ದ ಪಠಾಣ್‌ಗೆ 2008ರ ಬಳಿಕ ಟೆಸ್ಟ್ ಆಡುವ ಅವಕಾಶ ಸಿಕ್ಕಿಲ್ಲ. 2008,ಎಪ್ರಿಲ್ 2ರಿಂದ 8ರ ತನಕ ನಡೆದ ಅಹ್ಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು.
ಬೆಂಗಳೂರಿನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಪಠಾಣ್ 2008ರಲ್ಲಿ ಪರ್ತ್ ಟೆಸ್ಟ್‌ನಲ್ಲಿ ಉತ್ತಮ ಕೊಡುಗೆಯೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News