ಎರಡನೆ ಅತ್ಯಂತ ವೇಗದ ದ್ವಿಶತಕ ಸಿಡಿಸಿದ ಸ್ಟೋಕ್ಸ್

Update: 2016-01-03 18:25 GMT

ದ್ವಿತೀಯ ಟೆಸ್ಟ್: ದ. ಆಫ್ರಿಕ ವಿರುದ್ಧ ಇಂಗ್ಲೆಂಡ್ ಬೃಹತ್ ಮೊತ್ತ

ಕೇಪ್‌ಟೌನ್, ಜ.3: ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ದಕ್ಷಿಣ ಆಫ್ರಿಕ ವಿರುದ್ಧ ರವಿವಾರ ಕೇಪ್‌ಟೌನ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಎರಡನೆ ಅತ್ಯಂತ ವೇಗದ ದ್ವಿಶತಕ ಸಿಡಿಸುವ ಮೂಲಕ ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದರು. ಸ್ಟೋಕ್ಸ್ ಆರ್ಭಟದ ನೆರವಿನಿಂದ ಆಂಗ್ಲರು ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 629 ರನ್ ಕಲೆ ಹಾಕಿದರು.

 5ಕ್ಕೆ 317 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ಎರಡನೆ ದಿನದಾಟದಲ್ಲಿ 6 ವಿಕೆಟ್ ನಷ್ಟಕ್ಕೆ 629 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಜಾನ್ ಬೈರ್‌ಸ್ಟೋವ್(ಔಟಾಗದೆ 150) ಅವರೊಂದಿಗೆ 6ನೆ ವಿಕೆಟ್‌ಗೆ 399 ರನ್ ಜೊತೆಯಾಟವನ್ನು ನಡೆಸಿದ ಸ್ಟೋಕ್ಸ್ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಗಳಿಸಲು ನೆರವಾಗಿದ್ದಾರೆ.

ಇಂಗ್ಲೆಂಡ್ ತಂಡ ದ.ಆಫ್ರಿಕದ ವಿರುದ್ಧ ಟೆಸ್ಟ್‌ನಲ್ಲಿ 4.99 ರನ್‌ರೇಟ್ ಸರಾಸರಿಯಲ್ಲಿ ಎರಡನೆ ಗರಿಷ್ಠ ಸ್ಕೋರ್ ದಾಖಲಿಸಿತು. ಟೆಸ್ಟ್‌ನ ಎರಡನೆ ದಿನವಾದ ರವಿವಾರ ದಕ್ಷಿಣ ಆಫ್ರಿಕ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದ ಸ್ಟೋಕ್ಸ್ 163 ಎಸೆತಗಳಲ್ಲಿ 26 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ ದ್ವಿಶತಕವನ್ನು ಪೂರೈಸಿದರು. ಈ ಮೂಲಕ 2009-10ರಲ್ಲಿ ಶ್ರೀಲಂಕಾದ ವಿರುದ್ಧ ಎರಡನೆ ಅತ್ಯಂತ ವೇಗದ ದ್ವಿಶತಕ ದಾಖಲಿಸಿದ್ದ ಭಾರತದ ಮಾಜಿ ಸ್ಫೋಟಕ ದಾಂಡಿಗ ವೀರೇಂದ್ರ ಸೆಹ್ವಾಗ್‌ರ(168 ಎಸೆತ 200 ರನ್) ದಾಖಲೆಯನ್ನು ಮುರಿದರು.

 ನ್ಯೂಝಿಲೆಂಡ್‌ನ ನಥನ್ ಆ್ಯಸ್ಟ್ಲೇ 2001-02ರಲ್ಲಿ ಕೈಸ್ಟ್‌ಚರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ 153 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದರು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿರುವ ಅತ್ಯಂತ ವೇಗದ ದ್ವಿಶತಕವಾಗಿದೆ. ಜೀವನಶ್ರೇಷ್ಠ 258 ರನ್(198 ಎಸೆತ, 30 ಬೌಂಡರಿ, 11 ಸಿಕ್ಸರ್) ಗಳಿಸಿ ಡಿವಿಲಿಯರ್ಸ್‌ಗೆ ರನೌಟಾದ ಸ್ಟೋಕ್ಸ್ ಹಲವು ದಾಖಲೆಗಳನ್ನು ಮುರಿದು ಮುನ್ನುಗ್ಗಿದರು. ಸ್ಟೋಕ್ಸ್ 2 ವರ್ಷಗಳ ಹಿಂದೆ ಆಸ್ಟ್ರೇಲಿಯದ ವಿರುದ್ಧ ಪರ್ತ್‌ನಲ್ಲಿ 120 ರನ್ ಗಳಿಸಿದ್ದು, ಈವರೆಗಿನ ವೈಯಕ್ತಿಕ ಗರಿಷ್ಠ ಸ್ಕೋರಾಗಿತ್ತು.

 ಸ್ಟೋಕ್ಸ್ ದಾಖಲೆಯ ಸಂಕ್ಷಿಪ್ತ ವಿವರ:

*ಸ್ಟೋಕ್ಸ್ ಇಂಗ್ಲೆಂಡ್‌ನ ಪರ ಅತ್ಯಂತ ವೇಗವಾಗಿ ದ್ವಿಶತಕ ಸಿಡಿಸಿದ ಮೊದಲ ದಾಂಡಿಗ. ಜುಲೈ, 1982ರಲ್ಲಿ ದಿ ಓವಲ್‌ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್‌ನ ಇಯಾನ್ ಬೋಥಮ್ 220 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದರು.

*ಸ್ಟೋಕ್ಸ್ ಇನಿಂಗ್ಸ್‌ವೊಂದರಲ್ಲಿ 11 ಸಿಕ್ಸರ್ ಸಿಡಿಸಿದ ಇಂಗ್ಲೆಂಡ್‌ನ ಮೊದಲ ದಾಂಡಿಗ. 1933ರಲ್ಲಿ ತಮ್ಮದೇ ದೇಶದ ವ್ಯಾಲಿ ಹ್ಯಾಮಂಡ್(10 ಸಿಕ್ಸರ್) ನಿರ್ಮಿಸಿರುವ ದಾಖಲೆಯನ್ನು ಸ್ಟೋಕ್ಸ್ ಮುರಿದರು. *ಸ್ಟೋಕ್ಸ್ ದಕ್ಷಿಣ ಆಫ್ರಿಕ ವಿರುದ್ಧ ದ್ವಿಶತಕ ಸಿಡಿಸಿದ ಇಂಗ್ಲೆಂಡ್‌ನ ಮೂರನೆ ಆಟಗಾರ. ಎಡ್ಡಿ ಪೇಂಟರ್(1939) ಹಾಗೂ ಜಾನ್ ಎಡ್ರಿಚ್(1939) ಈ ಹಿಂದೆ ಈ ಸಾಧನೆ ಮಾಡಿದ್ದರು.

*ಸ್ಟೋಕ್ಸ್ ಹಾಗೂ ಬೈರ್‌ಸ್ಟೋವ್ 6ನೆ ವಿಕೆಟ್‌ಗೆ ಗರಿಷ್ಠ ಜೊತೆಯಾಟ(399ರನ್) ನಡೆಸುವುದರೊಂದಿಗೆ 2015ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ಕೇನ್ ವಿಲಿಯಮ್ಸನ್ ಹಾಗೂ ವಾಟ್ಲಿಂಗ್ 6ನೆ ವಿಕೆಟ್‌ಗೆ ದಾಖಲಿಸಿದ್ದ 365 ರನ್ ದಾಖಲೆಯ ಜೊತೆಯಾಟವನ್ನು ಮುರಿದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಪ್ರಥಮ ಇನಿಂಗ್ಸ್:

125.5 ಓವರ್‌ಗಳಲ್ಲಿ 629/6

(ಸ್ಟೋಕ್ಸ್ 258, ಬೈರ್‌ಸ್ಟೋವ್ ಔಟಾಗದೆ 150, ಹಾಲೆಸ್ 60, ರೂಟ್ 50, ಕಾಂಪ್ಟನ್ 45, ರಬಾಡ 3-175)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News