ಸೈಯದ್ ಮುಶ್ತಾಕ್ ಅಲಿ ಟ್ರೋಫಿ: ಕರ್ನಾಟಕ ತಂಡಕ್ಕೆ ರೋಚಕ ಜಯ

Update: 2016-01-03 18:13 GMT

ಸ್ಟುವರ್ಟ್ ಬಿನ್ನಿ ಆಲ್‌ರೌಂಡ್ ಆಟ

ಕಟಕ್,ಜ.3: ಸೈಯದ್ ಮುಶ್ತಾಕ್ ಅಲಿ ಟ್ರೋಫಿಯ ‘ಡಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಬಲಿಷ್ಠ ಮುಂಬೈ ವಿರುದ್ಧ ಒಂದು ರನ್‌ನಿಂದ ರೋಚಕ ಗೆಲುವು ಸಾಧಿಸಿದೆ. ಇಲ್ಲಿನ ಡಿಆರ್‌ಐಇಎಂಎಸ್ ಗ್ರೌಂಡ್‌ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 163 ರನ್ ಬೆನ್ನಟ್ಟಿದ ಮುಂಬೈ ತಂಡ ಒಂದು ಹಂತದಲ್ಲಿ 14.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ, ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಕರ್ನಾಟಕದ ಬೌಲರ್‌ಗಳು ಮುಂಬೈಯನ್ನು 20 ಓವರ್‌ಗಳಲ್ಲಿ 161 ರನ್‌ಗೆ ಆಲೌಟ್ ಮಾಡಿದರು.

ಮುಂಬೈನ ಪರ ಅಭಿಷೇಕ್ ನಾಯರ್(49) ಅಗ್ರ ಸ್ಕೋರರ್ ಎನಿಸಿಕೊಂಡರು. ಆರಂಭಿಕ ದಾಂಡಿಗ ಶ್ರೇಯಸ್ ಐಯ್ಯರ್(32) ಹಾಗೂ ನಾಯಕ ಆದಿತ್ಯ ತಾರೆ(28) ಉತ್ತಮ ಕಾಣಿಕೆ ನೀಡಿದರೂ ಇದು ತಂಡದ ಗೆಲುವಿಗೆ ಸಾಕಾಗಲಿಲ್ಲ. ಎಡಗೈ ಬೌಲರ್ ಶ್ರೀನಾಥ್ ಅರವಿಂದ್(2-32), ಮಧ್ಯಮ ವೇಗಿ ಸ್ಟುವರ್ಟ್ ಬಿನ್ನಿ(2-20) ಹಾಗೂ ಲೆಗ್ ಸ್ಪಿನ್ನರ್ ಕೆ.ಸಿ. ಕಾರ್ಯಪ್ಪ(2-32) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿ ವಿನಯ್ ಕುಮಾರ್ ಪಡೆ ರೋಚಕ ಗೆಲುವು ಸಾಧಿಸಿ ನಾಲ್ಕು ಅಂಕ ಗಳಿಸಲು ಕಾರಣರಾದರು.

 ಕರ್ನಾಟಕ 162ರನ್‌ಗೆ ಆಲೌಟ್: ಇದಕ್ಕೆ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿದ್ದ ಕರ್ನಾಟಕ ತಂಡ ನಿಗದಿತ 20 ಓವರ್‌ಗಳಲ್ಲಿ 162 ರನ್ ಗಳಿಸಿ ಆಲೌಟಾಗಿತ್ತು. ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ(38 ರನ್, 19 ಎಸೆತ, 3 ಬೌಂಡರಿ, 2 ಸಿಕ್ಸರ್) ದೊಡ್ಡ ಕೊಡುಗೆ ನೀಡಿದರು.

ಆರಂಭಿಕ ದಾಂಡಿಗ ಮುಹಮ್ಮದ್ ತಾಹ(37ರನ್, 32 ಎಸೆತ, 4 ಬೌಂಡರಿ, 1 ಸಿ.) ಹಾಗೂ ರಾಬಿನ್ ಉತ್ತಪ್ಪ(30 ರನ್, 25 ಎಸೆತ, 4 ಬೌಂಡರಿ, 1 ಸಿಕ್ಸರ್) ಉಪಯುಕ್ತ ಕೊಡುಗೆ ನೀಡಿದರು.

ವೇಗದ ಬೌಲರ್ ಧವಳ್ ಕುಲಕರ್ಣಿ(3-35) ಹಾಗೂ ಮಧ್ಯಮ ವೇಗಿ ರೋಹನ್ ರಾಜೆ(3-29) ತಲಾ 3 ವಿಕೆಟ್‌ಗಳನ್ನು ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: 20 ಓವರ್‌ಗಳಲ್ಲಿ 162 ರನ್‌ಗೆ ಆಲೌಟ್

(ಸ್ಟುವರ್ಟ್ ಬಿನ್ನಿ 38, ಮುಹಮ್ಮದ್ ತಾಹಾ 37, ಉತ್ತಪ್ಪ 30, ಧವಳ್ ಕುಲಕರ್ಣಿ 3-35, ರೋಹನ್ ರಾಜೆ 3-29)

ಮುಂಬೈ: 20 ಓವರ್‌ಗಳಲ್ಲಿ 161 ರನ್‌ಗೆ ಆಲೌಟ್

(ಅಭಿಷೇಕ್ ನಾಯರ್ 49, ಶ್ರೇಯಸ್ ಐಯ್ಯರ್ 32, ಆದಿತ್ಯ ತಾರೆ 28, ಎಸ್. ಅರವಿಂದ್ 2-32, ಸ್ಟುವರ್ಟ್ ಬಿನ್ನಿ 2-20, ಕೆಸಿ ಕಾರ್ಯಪ್ಪ 2-32)

ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಟೂರ್ನಿ

ಇತರ ಪಂದ್ಯಗಳ ಫಲಿತಾಂಶ

ನಾಗ್ಪುರ: ಎ ಗುಂಪು, ಬಂಗಾಳದ ವಿರುದ್ಧ ತಮಿಳುನಾಡಿಗೆ 69 ರನ್ ಜಯ

ವಡೋದರ: ಸಿ ಗುಂಪು, ಗೋವಾ ವಿರುದ್ಧ ಮ.ಪ್ರಕ್ಕೆ 7 ವಿಕೆಟ್ ಗೆಲುವು

ನಾಗ್ಪುರ: ಎ ಗುಂಪು, ವಿದರ್ಭ ವಿರುದ್ಧ ಗುಜರಾತ್‌ಗೆ 60 ರನ್ ಜಯ

ಕೊಚ್ಚಿ: ಬಿ ಗುಂಪು, ಜಮ್ಮು-ಕಾಶ್ಮೀರದ ವಿರುದ್ಧ ಪಂಜಾಬ್‌ಗೆ 8 ವಿಕೆಟ್ ಗೆಲುವು

ಕಟಕ್: ಡಿ ಗುಂಪು, ಒಡಿಶಾ ವಿರುದ್ಧ ಉ.ಪ್ರಕ್ಕೆ 32 ರನ್ ಜಯ

ವಡೋದರ: ಸಿ ಗುಂಪು, ಆಂಧ್ರ ವಿರುದ್ಧ ದಿಲ್ಲಿಗೆ 111 ರನ್ ಗೆಲುವು

ವಡೋದರ: ಸಿ ಗುಂಪು: ರೈಲ್ವೇಸ್ ವಿರುದ್ಧ ಬರೋಡಾಕ್ಕೆ 9 ರನ್ ಜಯ

ನಾಗ್ಪುರ: ಎ ಗುಂಪು, ಹಿಮಾಚಲ ಪ್ರದೇಶ ವಿರುದ್ಧ ಹೈದರಾಬಾದ್‌ಗೆ 14 ರನ್ ಗೆಲುವು

ಕೊಚ್ಚಿ: ಬಿ ಗುಂಪು, ತ್ರಿಪುರಾ ವಿರುದ್ಧ ಜಾರ್ಖಂಡ್‌ಗೆ 9 ವಿಕೆಟ್ ಜಯ

ಕೊಚ್ಚಿ: ಬಿ ಗುಂಪು, ರಾಜಸ್ಥಾನದ ವಿರುದ್ಧ ಕೇರಳಕ್ಕೆ 18 ರನ್ ಗೆಲುವು

ಕಟಕ್: ಡಿ ಗುಂಪು, ಸರ್ವಿಸಸ್ ವಿರುದ್ಧ ಮಹಾರಾಷ್ಟ್ರಕ್ಕೆ 31 ರನ್ ಜಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News