ಭಾರತ ವಿರುದ್ಧ ಏಕದಿನ ಸರಣಿ ಆಸ್ಟ್ರೇಲಿಯ ಕ್ರಿಕೆಟ್ ತಂಡ ಪ್ರಕಟ

Update: 2016-01-04 18:10 GMT

 ಸಿಡ್ನಿ, ಜ.4: ಭಾರತ ವಿರುದ್ಧ ಮೊದಲ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆಸ್ಟ್ರೇಲಿಯ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು, ಪ್ರಮುಖ ಸ್ಪಿನ್ನರ್ ನಥನ್ ಲಿಯೊನ್ 13 ಸದಸ್ಯರ ತಂಡಕ್ಕೆ ಆಯ್ಕೆಯಾಗಿಲ್ಲ. ವೇಗದ ಬೌಲರ್‌ಗಳಾದ ಸ್ಕಾಟ್ ಬೊಲೆಂಡ್ ಹಾಗೂ ಜೋಯೆಲ್ ಪ್ಯಾರಿಸ್ ಇದೇ ಮೊದಲ ಬಾರಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬೊಲೆಂಡ್ ಪ್ರಸ್ತುತ ನಡೆಯುತ್ತಿರುವ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು. ಪಶ್ಚಿಮ ಆಸ್ಟ್ರೇಲಿಯದ ಪ್ಯಾರಿಸ್ ಇದೇ ಮೊದಲ ಬಾರಿ ಆಸ್ಟ್ರೇಲಿಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇದೀಗ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಲಿಯೊನ್‌ರನ್ನು ತಂಡದಿಂದ ಕೈಬಿಡಲಾಗಿದೆ. ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸ್ಪಿನ್ ಬೌಲರ್ ಸ್ಥಾನ ತುಂಬಲಿದ್ದಾರೆ.

 ‘‘ಈ ವರ್ಷ ವಿಕ್ಟೋರಿಯ ತಂಡದ ಪರ ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಿರುವ ಸ್ಕಾಟ್ ಆಯ್ಕೆ ಸಮಿತಿಯ ಗಮನವನ್ನು ಸೆಳೆದಿದ್ದಾರೆ. ಅವರು ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಿದ್ದಾರೆ. ಜೋಯೆಲ್ ಯುವ ಎಡಗೈ ಬೌಲರ್ ಆಗಿದ್ದು, ಚೆಂಡನ್ನು ಚೆನ್ನಾಗಿ ಸ್ವಿಂಗ್ ಮಾಡಬಲ್ಲರು’’ ಎಂದು ಆಯ್ಕೆ ಸಮಿತಿಯ ಅಧ್ಯಕ್ಷರಾದ ರಾಡ್ ಮಾರ್ಷ್ ಹೇಳಿದ್ದಾರೆ.

2014ರಲ್ಲಿ ಕ್ಯಾನ್‌ಬೆರಾದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಆಡಿರುವ ದಕ್ಷಿಣ ಆಸ್ಟ್ರೇಲಿಯದ ವೇಗದ ಬೌಲರ್ ಕೇನ್ ರಿಚರ್ಡ್‌ಸನ್ ತಂಡಕ್ಕೆ ವಾಪಸಾಗಿದ್ದಾರೆ.

ಆಸೀಸ್‌ನ ಪ್ರಮುಖ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್, ನಥನ್ ಕೌಲ್ಟರ್-ನೀಲ್ ಹಾಗೂ ಪೀಟರ್ ಸಿಡ್ಲ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಬೊಲೆಂಡ್ ಹಾಗೂ ಪ್ಯಾರಿಸ್ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

  ಶೇನ್ ವ್ಯಾಟ್ಸನ್, ಉಸ್ಮಾನ್ ಖ್ವಾಜಾ ಹಾಗೂ ಜೋ ಬರ್ನ್ಸ್ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಪ್ರಮುಖ ಆಟಗಾರರಾಗಿದ್ದಾರೆ. ಆಸ್ಟ್ರೇಲಿಯ ಹಾಗೂ ಭಾರತ ತಂಡಗಳು ಕಳೆದ ಮಾರ್ಚ್‌ನಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು.

ಭಾರತ ಹಾಗೂ ಆಸ್ಟ್ರೇಲಿಯ ಜ.12 ರಿಂದ ಪರ್ತ್‌ನಲ್ಲಿ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆೆ. ಬ್ರಿಸ್ಬೇನ್(ಜ.15), ಮೆಲ್ಬೋರ್ನ್(ಜ.17), ಕ್ಯಾನ್‌ಬೆರಾ(ಜ.20) ಹಾಗೂ ಸಿಡ್ನಿ(ಜ.23)ಯಲ್ಲಿ ಉಳಿದ ನಾಲ್ಕು ಪಂದ್ಯಗಳು ನಡೆಯಲಿವೆ.

ಆಸ್ಟ್ರೇಲಿಯ ಏಕದಿನ ತಂಡ:

ಸ್ಟೀವನ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಜಾರ್ಜ್ ಬೈಲಿ, ಸ್ಕಾಟ್ ಬೊಲ್ಯಾಂಡ್, ಜೊಶ್ ಹೇಝಲ್‌ವುಡ್, ಜೇಮ್ಸ್ ಫಾಕ್ನರ್, ಆ್ಯರೊನ್ ಫಿಂಚ್, ಮಿಚೆಲ್ ಮಾರ್ಷ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್‌ಸನ್, ಜೊಯೆಲ್ ಪ್ಯಾರಿಸ್, ಮ್ಯಾಥ್ಯೂ ವೇಡ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News