×
Ad

ಉತ್ತರ ಪ್ರದೇಶಕ್ಕೆ ಶರಣಾದ ಕರ್ನಾಟಕ

Update: 2016-01-04 23:31 IST

ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಟೂರ್ನಿ

ಕಟಕ್,ಜ.4: ಕರ್ನಾಟಕ ತಂಡ ಸೋಮವಾರ ಇಲ್ಲಿ ನಡೆದ ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯ ‘ಡಿ’ ಗುಂಪಿನ ಪಂದ್ಯದಲ್ಲಿ ಉತ್ತರ ಪ್ರದೇಶದ ವಿರುದ್ಧ 5 ವಿಕೆಟ್‌ಗಳಿಂದ ಸೋಲುಂಡಿದೆ. ಕರ್ನಾಟಕ ಈ ಋತುವಿನಲ್ಲಿ ಎರಡನೆ ಬಾರಿ ಸೋತಿದೆ. ಮೊದಲ ಪಂದ್ಯದಲ್ಲಿ ಸರ್ವಿಸಸ್ ತಂಡದ ವಿರುದ್ಧ ಸೋತಿತ್ತು.

ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ತಂಡ ಆರಂಭಿಕ ದಾಂಡಿಗ ಮುಹಮ್ಮದ್ ತಾಹಾ(45ರನ್, 40 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಕೆಳ ಕ್ರಮಾಂಕದ ಸಿ.ಎಂ. ಗೌತಮ್(ಔಟಾಗದೆ 24) ಹಾಗೂ ಅನಿರುದ್ಧ ಜೋಶಿ(ಔಟಾಗದೆ 20) ಉಪಯುಕ್ತ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 160 ರನ್ ಗಳಿಸಿತು.

ಉತ್ತರ ಪ್ರದೇಶ ತಂಡ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ದಾಂಡಿಗರ ಸಂಘಟಿತ ಪ್ರದರ್ಶನದ ನೆರವಿನಿಂದ 19.1 ಓವರ್‌ಗಳಲ್ಲಿ 161 ರನ್ ಗಳಿಸಿತು. ಆರಂಭಿಕ ದಾಂಡಿಗ ಪ್ರಶಾಂತ್ ಗುಪ್ತಾ(48) ಅಗ್ರ ಸ್ಕೋರರ್ ಎನಿಸಿಕೊಂಡರು. ನಾಯಕ ಸುರೇಶ್ ರೈನಾ(28 ರನ್, 15 ಎಸೆತ, 3 ಸಿಕ್ಸರ್) ತಂಡದ ಗೆಲುವನ್ನು ಸುಲಭಗೊಳಿಸಿದರು.

ಏಕಲವ್ಯ ದ್ವಿವೇದಿ(ಔಟಾಗದೆ 29) ಹಾಗೂ ಆದಿತ್ಯನಾಥ್(ಔಟಾಗದೆ 9) ಉ.ಪ್ರಕ್ಕೆ 5 ವಿಕೆಟ್‌ಗಳ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಉಪ್ರ ತಂಡ ನಾಲ್ಕು ಅಂಕವನ್ನು ಗಳಿಸಿತು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: 20 ಓವರ್‌ಗಳಲ್ಲಿ 160/6

(ಮುಹಮ್ಮದ್ ತಾಹಾ 45, ಉತ್ತಪ್ಪ 25, ಗೌತಮ್ ಔಟಾಗದೆ 24, ಜೋಶಿ ಔಟಾಗದೆ 20, ಪಿಯೂಷ್ ಚಾವ್ಲಾ 2-24)

ಉತ್ತರಪ್ರದೇಶ: 19.1 ಓವರ್‌ಗಳಲ್ಲಿ 161/5

(ಪ್ರಶಾಂತ್ ಗುಪ್ತಾ 48, ಏಕಲವ್ಯ ದ್ವಿವೇದಿ ಔಟಾಗದೆ 29, ಸುರೇಶ್ ರೈನಾ 28, ವಿನಯಕುಮಾರ್ 1-26, ಕಾರ್ಯಪ್ಪ 1-34)

ದಿನದ ಹೈಲೈಟ್ಸ್

ಚೇತೇಶ್ವರ ಪೂಜಾರ ಗರಿಷ್ಠ ಸ್ಕೋರ್: ಸೌರಾಷ್ಟ್ರದ ಚೇತೇಶ್ವರ ಪೂಜಾರ ದೇಶೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್(81ರನ್, 55 ಎಸೆತ, 5 ಬೌಂಡರಿ, 5 ಸಿಕ್ಸರ್) ದಾಖಲಿಸಿದ್ದಾರೆ. ಪೂಜಾರ ಸಾಹಸದ ನೆರವಿನಿಂದ ಸೌರಾಷ್ಟ್ರ ತಂಡ ಕೊಚ್ಚಿಯಲ್ಲಿ ನಡೆದ ಪಂದ್ಯದಲ್ಲಿ ಜಮ್ಮು-ಕಾಶ್ಮೀರವನ್ನು 73 ರನ್‌ಗಳ ಅಂತರದಿಂದ ಮಣಿಸಿತು.

 ಚಿರಾಗ್ ಜಾನಿ(38ರನ್, 19 ಎಸೆತ) ಅವರೊಂದಿಗೆ 70 ರನ್ ಜೊತೆಯಾಟ ನಡೆಸಿದ ಪೂಜಾರ ಸೌರಾಷ್ಟ್ರ ತಂಡ 7 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲು ನೆರವಾದರು. ಗೆಲ್ಲಲು ಕಠಿಣ ಸವಾಲು ಪಡೆದ ಜಮ್ಮು-ಕಾಶ್ಮೀರ ಧರ್ಮೇಂದ್ರ ಸಿನ್ಹಾ(3-19) ದಾಳಿಗೆ ಸಿಲುಕಿ 18 ಓವರ್‌ಗಳಲ್ಲಿ 84 ರನ್‌ಗೆ ಆಲೌಟಾಯಿತು.

 ಬಿಪ್ಲಬ್ ಸಮಂಟ್ರೆ ಚೊಚ್ಚಲ ಶತಕ ವ್ಯರ್ಥ: ಕಟಕ್‌ನಲ್ಲಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಒಡಿಶಾ ತಂಡ ಮಹಾರಾಷ್ಟ್ರದ ವಿರುದ್ಧ 4 ವಿಕೆಟ್‌ಗಳಿಂದ ಶರಣಾಗಿದೆ. ಚೊಚ್ಚಲ ಶತಕ ಸಿಡಿಸಿದ ಸಮಂಟ್ರೆ (59 ಎಸೆತ, 102 ರನ್) ಗೋವಿಂದ ಪೊದ್ದಾರ್‌ರೊಂದಿಗೆ 3ನೆ ವಿಕೆಟ್‌ಗೆ 155 ರನ್ ಜೊತೆಯಾಟ ನಡೆಸಿ ಒಡಿಶಾ ತಂಡ 183 ರನ್ ಗಳಿಸಲು ನೆರವಾದರು. ಆದರೆ, ಪ್ರಯಾಗ್ ಭಟ್ಟಿ(44) ಹಾಗು ಅಂಕಿತ್ ಭಾವ್ನೆ(49) ನೆರವಿನಿಂದ ಮಹಾರಾಷ್ಟ್ರ ತಂಡ ಅಂತಿಮ ಎಸೆತದಲ್ಲಿ ಗೆಲುವಿನ ರನ್ ದಾಖಲಿಸಿತು.

ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಟೂರ್ನಿ

ಇತರ ಪಂದ್ಯಗಳ ಫಲಿತಾಂಶ

ನಾಗ್ಪುರ: ಎ ಗುಂಪು, ಹರ್ಯಾಣದ ವಿರುದ್ಧ ವಿದರ್ಭಕ್ಕೆ 8 ವಿಕೆಟ್ ಜಯ

ವಡೋದರ: ಸಿ ಗುಂಪು, ಆಂಧ್ರ ವಿರುದ್ಧ ರೈಲ್ವೇಸ್‌ಗೆ 7 ರನ್ ಗೆಲುವು

ನಾಗ್ಪುರ: ಎ ಗುಂಪು, ಹಿಮಾಚಲ ಪ್ರದೇಶ ವಿರುದ್ಧ ಬಂಗಾಳಕ್ಕೆ 2 ರನ್ ಜಯ

ಕೊಚ್ಚಿ: ಬಿ ಗುಂಪು, ಜಮ್ಮು-ಕಾಶ್ಮೀರದ ವಿರುದ್ಧ ಸೌರಾಷ್ಟ್ರಕ್ಕೆ 73 ರನ್ ಗೆಲುವು

ಕಟಕ್: ಡಿ ಗುಂಪು, ಒಡಿಶಾ ವಿರುದ್ಧ ಮಹಾರಾಷ್ಟ್ರಕ್ಕೆ 4 ವಿಕೆಟ್ ಜಯ

ವಡೋದರ: ಸಿ ಗುಂಪು, ಗೋವಾ ವಿರುದ್ಧ ಅಸ್ಸಾಂಗೆ 4 ವಿಕೆಟ್ ಗೆಲುವು

ವಡೋದರ: ಸಿ ಗುಂಪು: ಮಧ್ಯಪ್ರದೇಶದ ವಿರುದ್ಧ ದಿಲ್ಲಿಗೆ 4 ವಿಕೆಟ್ ಜಯ

ನಾಗ್ಪುರ: ಎ ಗುಂಪು, ಹೈದರಾಬಾದ್ ವಿರುದ್ಧ ಗುಜರಾತ್‌ಗೆ 3 ವಿಕೆಟ್ ಗೆಲುವು

ಕೊಚ್ಚಿ: ಬಿ ಗುಂಪು, ರಾಜಸ್ಥಾನದ ವಿರುದ್ಧ ಜಾರ್ಖಂಡ್‌ಗೆ 8 ವಿಕೆಟ್ ಜಯ

ಕೊಚ್ಚಿ: ಬಿ ಗುಂಪು, ತ್ರಿಪುರಾ ವಿರುದ್ಧ ಕೇರಳಕ್ಕೆ 8 ವಿಕೆಟ್ ಗೆಲುವು

ಕಟಕ್: ಡಿ ಗುಂಪು, ಸರ್ವಿಸಸ್ ವಿರುದ್ಧ ಮುಂಬೈಗೆ 8 ವಿಕೆಟ್ ಜಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News