ಒಲಿಂಪಿಕ್ಸ್‌ನಲ್ಲಿ ಬೋಪಣ್ಣ ನಿರಾಸಕ್ತಿ : ಪೇಸ್
ಹೊಸದಿಲ್ಲಿ, ಜ.4: ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ತನ್ನೊಂದಿಗೆ ಡಬಲ್ಸ್ ಪಂದ್ಯ ಆಡಲು ರೋಹನ್ ಬೋಪಣ್ಣ ನಿರಾಕರಿಸುತ್ತಿದ್ದಾರೆ ಎಂದು ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಬಹಿರಂಗಪಡಿಸಿದ್ದಾರೆ. ಈ ಬೆಳವಣಿಗೆಯು ಒಲಿಂಪಿಕ್ಸ್‌ಗೆ ಮೊದಲು ಭಾರತದ ಟೆನಿಸ್‌ಗೆ ಒಂದು ಕಹಿ ಸುದ್ದಿಯಾಗಿದೆ.
2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೋಪಣ್ಣ ಹಾಗೂ ಮಹೇಶ್ ಭೂಪತಿ ಡಬಲ್ಸ್ ಪಂದ್ಯ ಆಡಲು ನಿರ್ಧರಿಸಿದಾಗ ಪೇಸ್ ಒಲಿಂಪಿಕ್ಸ್‌ನಿಂದ ದೂರ ಉಳಿಯುವುದಾಗಿ ಬೆದರಿಕೆ ಹಾಕಿದ್ದರು. ಆ ನಂತರ ಪೇಸ್ ಅವರು ಹೊಸ ಮುಖ ವಿಷ್ಣು ವರ್ಧನ್‌ರೊಂದಿಗೆ ಡಬಲ್ಸ್ ಪಂದ್ಯ ಆಡಿದ್ದರು. ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ಮಿಶ್ರ ಡಬಲ್ಸ್‌ನಲ್ಲಿ ಪೇಸ್‌ಗೆ ಸಾನಿಯಾ ಮಿರ್ಝಾರನ್ನು ಜೋಡಿಯಾಗಿ ಆಯ್ಕೆ ಮಾಡಿತ್ತು.
ನಾಲ್ಕು ವರ್ಷಗಳ ನಂತರ ಪರಿಸ್ಥಿತಿ ಬದಲಾಗಿದೆ. ಭೂಪತಿ ಅಂತಾರಾಷ್ಟ್ರೀಯ ಟೆನಿಸ್‌ನಿಂದ ದೂರವುಳಿದಿದ್ದಾರೆ. ಪೇಸ್ ಹಾಗೂ ಬೋಪಣ್ಣ ಡಬಲ್ಸ್‌ನಲ್ಲಿ ಆಡಲಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಬೋಪಣ್ಣ ಅವರು 42ರ ಹರೆಯದ ಪೇಸ್‌ರೊಂದಿಗೆ ಡಬಲ್ಸ್ ಆಡಲು ನಿರಾಕರಿಸಿದ್ದಾರೆ ಎಂಬ ವಿಷಯ ಇದೀಗ ಬಹಿರಂಗವಾಗಿದೆ.
‘‘ಈ ವರ್ಷ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟಿಗೆ ಆಡುವ ಕುರಿತು ಬೋಪಣ್ಣರಲ್ಲಿ ತಾನು ಮಾತನಾಡಿದೆ. ಆದರೆ, ಅವರು ತನ್ನೊಂದಿಗೆ ಆಡಲು ಒಲವು ವ್ಯಕ್ತಪಡಿಸಲಿಲ್ಲ. ಫ್ಲಾರಿನ್ ಮೆರ್ಗಿಯಾರೊಂದಿಗೆ ಡಬಲ್ಸ್ ಪಂದ್ಯ ಆಡುವುದನ್ನು ಮುಂದುವರಿಸುವುದಾಗಿ ಅವರು ತನ್ನಲ್ಲಿ ಹೇಳಿದರು’’ ಎಂದು ಪೇಸ್ ತಿಳಿಸಿದ್ದಾರೆ.
ಪೇಸ್ ಹಾಗೂ ಸ್ವಿಸ್ ದಂತಕತೆ ಮಾರ್ಟಿನಾ ಹಿಂಗಿಸ್ ಕಳೆದ ಋತುವಿನಲ್ಲಿ ಮೂರು ಮಿಶ್ರ ಡಬಲ್ಸ್ ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಒಟ್ಟಿಗೆ ಆಡಿರುವ ಪೇಸ್ ಹಾಗು ಸಾನಿಯಾ ಈ ವರ್ಷವೂ ಮಿಶ್ರ ಡಬಲ್ಸ್‌ನಲ್ಲಿ ಆಡುತ್ತಾರೋ ಎಂಬ ಬಗ್ಗೆ ಕುತೂಹಲವಿದೆ.
‘‘ಮಿಶ್ರ ಡಬಲ್ಸ್‌ನಲ್ಲಿ ಭಾರತ ಮುಂಚೂಣಿಯಲ್ಲಿದೆ. ಒಲಿಂಪಿಕ್ಸ್‌ನಲ್ಲಿ ಸಾನಿಯಾರೊಂದಿಗೆ ಆಡಲು ತಾನು ಸಿದ್ಧವಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆಲ್ಲುವ ಉತ್ತಮ ಅವಕಾಶವಿದೆ. ತಾನು ಮೂರು ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದು, ದಾಖಲೆಗಳು ತನ್ನ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ’’ಎಂದು ಪೇಸ್ ತಿಳಿಸಿದ್ದಾರೆ.