ವಿಶ್ವ ದಾಖಲೆ ವೀರ ಪ್ರಣವ್‌ಗೆ ಎಂಸಿಎ ಸ್ಕಾಲರ್‌ಶಿಪ್
ಮುಂಬೈ, ಜ.6: ಭಂಡಾರಿ ಕಪ್ ಅಂತರ್-ಶಾಲಾ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಆರ್ಯ ಗುರುಕುಲ ತಂಡದ ವಿರುದ್ಧ ಔಟಾಗದೆ 1009ರನ್ ಗಳಿಸಿ ನೂತನ ವಿಶ್ವ ದಾಖಲೆ ನಿರ್ಮಿಸಿರುವ ಪ್ರಣವ್ ಧನವಾಡೆ ಅವರನ್ನು ಮುಂಬೈ ಕ್ರಿಕೆಟ್ ಸಂಸ್ಥೆಯ(ಎಂಸಿಎ) ಉಪಾಧ್ಯಕ್ಷ ದಿಲಿಪ್ ವೆಂಗ್‌ಸರ್ಕಾರ್ ಬುಧವಾರ ಸನ್ಮಾನಿಸಿದರು.
ಕಲ್ಯಾಣ್‌ನ ಕೆಸಿ ಗಾಂಧಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಧನವಾಡೆ ಮಂಗಳವಾರ ಎಂಸಿಎ ಆಶ್ರಯದಲ್ಲಿ ನಡೆದ ದ್ವಿದಿನ ಟೂರ್ನಿಯಲ್ಲಿ 395 ನಿಮಿಷಗಳ ಬ್ಯಾಟಿಂಗ್ ನಡೆಸಿ 323 ಎಸೆತಗಳಲ್ಲಿ 59 ಸಿಕ್ಸರ್ ಹಾಗೂ 129 ಬೌಂಡರಿಗಳನ್ನು ಒಳಗೊಂಡ 1009ರನ್ ಗಳಿಸಿದ್ದರು. ಧನವಾಡೆ ಇನಿಂಗ್ಸ್‌ವೊಂದರಲ್ಲಿ ಸಾವಿರಕ್ಕೂ ಅಧಿಕ ರನ್ ಗಳಿಸಿದ ಮೊದಲ ಕ್ರಿಕೆಟಿಗನೆಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಧನವಾಡೆ ಅವರನ್ನು ಸನ್ಮಾನಿಸಿರುವ ಎಂಸಿಎ ಪ್ರತಿ ತಿಂಗಳು 10,000 ರೂ.ನಂತೆ ಮಂದಿನ ಐದು ವರ್ಷಗಳ ಕಾಲ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಿದೆ. ವಿದ್ಯಾರ್ಥಿವೇತನ ಜ.2016 ರಿಂದ ಆರಂಭವಾಗಿ ಡಿ.2021ರ ತನಕ ನೀಡಲಾಗುತ್ತದೆ.
‘‘ನಾನು ಬ್ಯಾಟಿಂಗ್ ಆರಂಭಿಸಿದಾಗ ಇಷ್ಟೊಂದು ದೊಡ್ಡ ಮೊತ್ತವನ್ನು ಗಳಿಸುತ್ತೇನೆಂಬ ಕಲ್ಪನೆಯೂ ಇರಲಿಲ್ಲ. ಸಮಯ ಕಳೆದಂತೆ ಆತ್ಮವಿಶ್ವಾಸ ಹೆಚ್ಚಾಗತೊಡಗಿತ್ತು. ಕ್ರಿಕೆಟ್ ದಿಗ್ಗಜರಾದ ಸಚಿನ್ (ತೆಂಡುಲ್ಕರ್), (ವಿನೋದ್) ಕಾಂಬ್ಳಿ, ಅರ್ಮಾನ್ ಜಾಫರ್ ದಾಖಲೆಯನ್ನು ಮುರಿದಿರುವುದಕ್ಕೆ ನಿಜವಾಗಿಯೂ ಸಂತೋಷವಾಗುತ್ತಿದೆ. ಮಹಾರಾಷ್ಟ್ರ ಸರಕಾರ ತನಗೆ ಕ್ರಿಕೆಟ್ ತರಬೇತಿ ಹಾಗೂ ಶಿಕ್ಷಣಕ್ಕಾಗಿ ಸಹಾಯಹಸ್ತ ಚಾಚಿರುವುದಕ್ಕೆ ಹೆಮ್ಮೆಯಾಗುತ್ತಿದೆ’’ ಎಂದು ಪ್ರಣವ್ ಹೇಳಿದ್ದಾರೆ.