×
Ad

ಅಂಪೈರ್‌ರೊಂದಿಗೆ ಅನುಚಿತ ವರ್ತನೆ: ಬ್ರಾಡ್‌ಗೆ ದಂಡ

Update: 2016-01-06 23:41 IST

ಕೇಪ್‌ಟೌನ್, ಜ.6: ದಕ್ಷಿಣ ಆಫ್ರಿಕ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಅಂಪೈರ್ ಅಲೀಮ್ ದರ್ ಅವರೊಂದಿಗೆ ಅನುಚಿತವಾಗಿ ವರ್ತಿಸಿರುವ ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್‌ಗೆ ಪಂದ್ಯಶುಲ್ಕದಲ್ಲಿ ಶೇ.30ರಷ್ಟು ದಂಡ ವಿಧಿಸಲಾಗಿದೆ.

 ದಕ್ಷಿಣ ಆಫ್ರಿಕದ ಮೊದಲ ಇನಿಂಗ್ಸ್‌ನ ವೇಳೆ 195ನೆ ಓವರ್‌ನಲ್ಲಿ ಈ ಘಟನೆ ನಡೆದಿದೆ. ವೇಗದ ಬೌಲರ್ ಬ್ರಾಡ್ ವಿಕೆಟ್ ಸಿಗದ ಹತಾಶೆಯಲ್ಲಿ ಪಿಚ್‌ಗೆ ಹಾನಿಗೊಳಿಸಲು ಯತ್ನಿಸಿದಾಗ ಅಂಪೈರ್ ದರ್ ಇಂಗ್ಲೆಂಡ್ ನಾಯಕ ಅಲೆಸ್ಟೈರ್ ಕುಕ್‌ಗೆ ಎಚ್ಚರಿಕೆ ನೀಡಿದರು.

 ಆಗ ಅಂಪೈರ್ ದರ್ ಅವರೊಂದಿಗೆ ವಾಗ್ವಾದ ನಡೆಸಿದ ಬ್ರಾಡ್ ಐಸಿಸಿ ನೀತಿ ಸಂಹಿತೆ ಆರ್ಟಿಕಲ್ 2.1.5ನ್ನು ಉಲ್ಲಂಘಿಸಿದ್ದರು. ಬ್ರಾಡ್ ತನ್ನ ತಪ್ಪಿಗೆ ಕ್ಷಮೆ ಕೋರಲಿಲ್ಲ. ಮಂಗಳವಾರದ ಪಂದ್ಯ ಮುಗಿದ ನಂತರ ಮ್ಯಾಚ್ ರೆಫರಿ ರಂಜನ್ ಮದುಗಲೆ ಘಟನೆಯ ಕುರಿತು ವಿಚಾರಣೆ ನಡೆಸಿ ಬ್ರಾಡ್‌ಗೆ ಪಂದ್ಯಶುಲ್ಕದಲ್ಲಿ ಶೇ.50ರಷ್ಟು ದಂಡ ಪ್ರಕಟಿಸಿದರು. ಪ್ರಸ್ತುತ ಐಸಿಸಿ ಮ್ಯಾಚ್ ರೆಫರಿ ಆಗಿ ಕಾರ್ಯನಿರ್ವಹಿಸುತ್ತಿರುವ ಕ್ರಿಸ್ ಬ್ರಾಡ್ ಪುತ್ರ ಬ್ರಾಡ್ ಈ ಹಿಂದೆಯೂ ಹಲವು ಬಾರಿ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರು. 2011ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಅಂಪೈರ್ ಬಿಲ್ಲಿ ಬೌಡೆನ್ ತೀರ್ಪನ್ನು ಪ್ರಶ್ನಿಸಿ ನಿಯಮ ಉಲ್ಲಂಘಿಸಿದ್ದರು.

2010ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಪಾಕ್ ವಿಕೆಟ್‌ಕೀಪರ್ ಹೈದರ್‌ಗೆ ಚೆಂಡನ್ನು ಬಿಸಾಡಿದ ತಪ್ಪಿಗೆ ದಂಡ ಪಾವತಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News