ಆಫ್ರಿಕ ಟೆಸ್ಟ್ ತಂಡದ ನಾಯಕತ್ವಕ್ಕೆ ಅಮ್ಲ ರಾಜೀನಾಮೆ
ಕೇಪ್‌ಟೌನ್, ಜ.6: ದಕ್ಷಿಣ ಆಫ್ರಿಕದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಹಾಶಿಮ್ ಅಮ್ಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ತೆರವಾಗಿರುವ ಸ್ಥಾನಕ್ಕೆ ಉಪ ನಾಯಕ ಎಬಿ ಡಿವಿಲಿಯರ್ಸ್ ನೇಮಕಗೊಂಡಿದ್ದಾರೆ.
ದಕ್ಷಿಣ ಆಫ್ರಿಕ ತಂಡವನ್ನು ನಾಯಕರಾಗಿ ಅಮ್ಲ 14 ಟೆಸ್ಟ್‌ಗಳಲ್ಲಿ ಮುನ್ನಡೆಸಿದ್ದಾರೆ. ಅವರ ನಾಯಕತ್ವದಲ್ಲಿ ಆಫ್ರಿಕ ತಂಡ ನಾಲ್ಕರಲ್ಲಿ ಜಯ,4ರಲ್ಲಿ ಸೋಲು ಮತ್ತು 6ರಲ್ಲಿ ಡ್ರಾ ಸಾಧಿಸಿದೆ.
ಜೂನ್ 2014ರಲ್ಲಿ ನಾಯಕ ಗ್ರೇಮ್ ಸ್ಮಿತ್ ನಿವೃತ್ತಿಯ ಬಳಿಕ ಅಮ್ಲ ದಕ್ಷಿಣ ಆಫ್ರಿಕದ ಟೆಸ್ಟ್ ತಂಡದ ನಾಯಕರಾಗಿ ನೇಮಕಗೊಂಡಿದ್ದರು.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಆಫ್ರಿಕ ಸೋಲು ಅನುಭವಿಸಿತ್ತು. ಎರಡನೆ ಟೆಸ್ಟ್‌ನ್ನು ಡ್ರಾ ಮಾಡಿಕೊಂಡಿದೆ. ಕಳೆದ ವರ್ಷ ಭಾರತ ಪ್ರವಾಸದಲ್ಲಿ ಆಫ್ರಿಕ ಟೆಸ್ಟ್ ಸರಣಿಯನ್ನು 0-3 ಅಂತರದಲ್ಲಿ ಕಳೆದುಕೊಂಡಿತ್ತು. ನಾಲ್ಕು ಟೆಸ್ಟ್‌ಗಳ 7 ಇನಿಂಗ್ಸ್‌ಗಳಲ್ಲಿ ಅಮ್ಲ ಅವರು ಕೇವಲ 118 ರನ್ ದಾಖಲಿಸಿದ್ದರು. ಅಮ್ಲ ನಾಯಕತ್ವದಲ್ಲಿ ವೈಫಲ್ಯ ಅನುಭವಿಸಿದ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಇತ್ತೀಚಿನ ದಿನಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಅಮ್ಲ ಇಂಗ್ಲೆಂಡ್ ವಿರುದ್ದ ಮುಕ್ತಾಯಗೊಂಡ ಎರಡನೆ ಟೆಸ್ಟ್‌ನಲ್ಲಿ ದ್ವಿಶತಕ ದಾಖಲಿಸಿ ಫಾರ್ಮ್‌ಗೆ ಮರಳಿದ್ದರು.32ರ ಹರೆಯದ ಅಮ್ಲ 90 ಟೆಸ್ಟ್‌ಗಳಲ್ಲಿ ಈ ವರೆಗೆ 24 ಶತಕ ಮತ್ತು 28 ಅರ್ಧಶತಕಗಳನ್ನು ಒಳಗೊಂಡ 7,108 ರನ್ ಸಂಪಾದಿಸಿದ್ದಾರೆ.