ಕರ್ನಾಟಕದ ಕ್ವಾರ್ಟರ್‌ಫೈನಲ್ ಹಾದಿ ಕಠಿಣ

Update: 2016-01-07 18:17 GMT

ಮಹಾರಾಷ್ಟ್ರದ ವಿರುದ್ಧ ಮತ್ತೊಂದು ಸೋಲು

 ಕಟಕ್, ಜ.7: ಸೈಯದ್ ಮುಶ್ತಾಕ್ ಅಲಿ ಟ್ರೋಫಿಯ ‘ಡಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರದ ವಿರುದ್ಧ 26 ರನ್‌ಗಳಿಂದ ಸೋಲುಂಡಿದೆ. ಈ ಸೋಲಿನೊಂದಿಗೆ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೇರುವ ಕರ್ನಾಟಕದ ಹಾದಿ ಕಠಿಣವಾಗಿದೆ.

 ಪ್ರಸಕ್ತ ಋತುವಿನಲ್ಲಿ ರಣಜಿ ಟ್ರೋಫಿ ಹಾಗೂ ವಿಜಯ್ ಹಝಾರೆ ಟ್ರೋಫಿ ಟೂರ್ನಿಗಳ ಲೀಗ್ ಹಂತದಲ್ಲಿ ಸೋಲು ಅನುಭವಿಸಿರುವ ವಿನಯ್ ಕುಮಾರ್ ಪಡೆ ಪ್ರಸ್ತುತ ಟೂರ್ನಿಯಲ್ಲಿ ಅಂತಿಮ 8ರ ಘಟ್ಟ ಪ್ರವೇಶಿಸಲು ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗಿತ್ತು. ಆದರೆ, ಇದೀಗ ಮಹಾರಾಷ್ಟ್ರ ವಿರುದ್ಧದ ಪಂದ್ಯವನ್ನು ಸೋತಿದೆ. ಕರ್ನಾಟಕ ನಾಲ್ಕು ಪಂದ್ಯಗಳ ಪೈಕಿ ಮೂರನೆ ಸೋಲು ಕಂಡಿದೆ.

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮಹಾರಾಷ್ಟ್ರ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಿತ್ತು. ನಿಖಿಲ್ ನಾಯಕ್(67) ಮಹಾರಾಷ್ಟ್ರ ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ನೆರವಾದರು. ಕರ್ನಾಟಕದ ಪರ ನಾಯಕ ಆರ್. ವಿನಯಕುಮಾರ್(3-32) ಹಾಗೂ ಮಿಥುನ್(2-30) ಐದು ವಿಕೆಟ್‌ಗಳನ್ನು ಹಂಚಿಕೊಂಡರು.

ಗೆಲ್ಲಲು ಕಠಿಣ ಸವಾಲು ಪಡೆದ ಕರ್ನಾಟಕ ತಂಡ ಆರಂಭಿಕ ದಾಂಡಿಗ ರಾಬಿನ್ ಉತ್ತಪ್ಪರ(80 ರನ್, 52 ಎಸೆತ, 10 ಬೌಂಡರಿ, 2 ಸಿಕ್ಸರ್) ಏಕಾಂಗಿ ಹೋರಾಟದ ಹೊರತಾಗಿಯೂ 18.3 ಓವರ್‌ಗಳಲ್ಲಿ 158 ರನ್‌ಗೆ ಆಲೌಟಾಯಿತು.

19ನೆ ಓವರ್ ತನಕ ಕ್ರೀಸ್‌ನಲ್ಲಿದ್ದ ಉತ್ತಪ್ಪರಿಗೆ ನಾಯಕ ವಿನಯಕುಮಾರ್ ಹೊರತುಪಡಿಸಿ ಉಳಿದ ದಾಂಡಿಗರು ಉತ್ತಮ ಸಾಥ್ ನೀಡಲಿಲ್ಲ. ಉತ್ತಪ್ಪ ಹಾಗೂ ವಿನಯ್ 6ನೆ ವಿಕೆಟ್‌ನಲ್ಲಿ ಇನಿಂಗ್ಸ್‌ನಲ್ಲ್ಲೆ ಗರಿಷ್ಠ ಜೊತೆಯಾಟ(47ರನ್) ನಡೆಸಿದರು.

ಕಳೆದ ಎರಡೂ ಪಂದ್ಯಗಳಲ್ಲಿ ಉಪಯುಕ್ತ ಕಾಣಿಕೆ ನೀಡಿದ್ದ ಆರಂಭಿಕ ದಾಂಡಿಗ ಮುಹಮ್ಮದ್ ತಾಹ ಕೇವಲ 4 ರನ್ ಗಳಿಸಿ ಮುತ್ತುಸ್ವಾಮಿಗೆ ವಿಕೆಟ್ ಒಪ್ಪಿಸಿದರು.

 ಮಹಾರಾಷ್ಟ್ರದ ಪರ ಅನುಪಮ್ ಸಂಕ್ಲೆಚಾ(3-23) ಯಶಸ್ವಿ ಬೌಲರ್ ಎನಿಸಿಕೊಂಡರು. ಮುತ್ತು ಸ್ವಾಮಿ(2-30) ಹಾಗೂ ರಾಹುಲ್ ತ್ರಿಪಾಠಿ(2-31) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್

ಮಹಾರಾಷ್ಟ್ರ: 20 ಓವರ್‌ಗಳಲ್ಲಿ 184/8

(ನಿಖಿಲ್ ನಾಯಕ್ 67, ಪ್ರಯಾಗ್ ಭಟಿ 39, ಭಾವ್ನೆ 33, ವಿನಯಕುಮಾರ್ 3-32, ಮಿಥುನ್ 2-30)

ಕರ್ನಾಟಕ 18.3 ಓವರ್‌ಗಳಲ್ಲಿ 158 ರನ್‌ಗೆ ಆಲೌಟ್

 (ಉತ್ತಪ್ಪ 80, ವಿನಯಕುಮಾರ್ 23, ಅನುಪಮ್ ಸಂಕ್ಲೇಚಾ 3-23, ಮುತ್ತುಸ್ವಾಮಿ 2-30, ತ್ರಿಪಾಠಿ 2-31)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News