ಮೊದಲ ಟ್ವೆಂಟಿ-20: ನ್ಯೂಝಿಲೆಂಡ್‌ಗೆ ರೋಚಕ ಜಯ

Update: 2016-01-07 18:20 GMT

ಅಂತಿಮ ಓವರ್‌ನಲ್ಲಿ ಎಡವಿದ ಶ್ರೀಲಂಕಾ

ವೆಲ್ಲಿಂಗ್ಟನ್, ಜ.7: ಮಾರ್ಟಿನ್ ಗಪ್ಟಿಲ್(58 ರನ್) ಹಾಗೂ ಕೇನ್ ವಿಲಿಯಮ್ಸನ್ (53 ರನ್) ಅರ್ಧಶತಕದ ಬೆಂಬಲದಿಂದ ನ್ಯೂಝಿಲೆಂಡ್ ತಂಡ ಗುರುವಾರ ಇಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು 3 ರನ್‌ನಿಂದ ಗೆದ್ದುಕೊಂಡಿದೆ.

ಟಾಸ್ ಜಯಿಸಿದ ಶ್ರೀಲಂಕಾ ತಂಡ ನ್ಯೂಝಿಲೆಂಡ್‌ನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮೊದಲ ವಿಕೆಟ್‌ಗೆ 101 ರನ್ ಜೊತೆಯಾಟ ನಡೆಸಿದ ಗಪ್ಟಿಲ್(58 ರನ್, 34 ಎಸೆತ) ಹಾಗೂ ವಿಲಿಯಮ್ಸನ್(53 ರನ್, 42 ಎಸೆತ) ಕಿವೀಸ್ 4 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಲು ನೆರವಾದರು.

ಗೆಲ್ಲಲು ಕಠಿಣ ಗುರಿ ಪಡೆದಿದ್ದ ಶ್ರೀಲಂಕಾ 9 ವಿಕೆಟ್‌ಗಳ ನಷ್ಟಕ್ಕೆ 179 ರನ್ ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು. ವಿಶ್ವದ ಅಗ್ರ ರ್ಯಾಂಕಿನ ಟ್ವೆಂಟಿ-20 ತಂಡ ಶ್ರೀಲಂಕಾ ಐದನೆ ಓವರ್‌ನಲ್ಲಿ 42 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.

ತಿಲಕರತ್ನೆ ದಿಲ್ಶನ್(0), ದಿನೇಶ್ ಚಾಂಡಿಮಾಲ್(7), ಶೆಹಾನ್ ಜಯಸೂರ್ಯ(4) ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್(4) ಬೇಗನೆ ಪೆವಿಲಿಯನ್ ಸೇರಿದರು.

ದನುಶ್ಕಾ ಗುಣತಿಲಕ(46) ಹಾಗೂ ಮಲಿಂದ ಸಿರಿವರ್ಧನ(42) ಶ್ರೀಲಂಕಾವನ್ನು ಗೆಲುವಿನತ್ತ ಕೊಂಡೊಯ್ಯಲು ಯತ್ನಿಸಿದರು. ಲಂಕೆಗೆ ಅಂತಿಮ 5 ಓವರ್‌ಗಳಲ್ಲಿ 4 ವಿಕೆಟ್ ನೆರವಿನಿಂದ 44 ರನ್ ಅಗತ್ಯವಿತ್ತು. ಸಿರಿವರ್ಧನ 17ನೆ ಓವರ್‌ನಲ್ಲಿ ಔಟಾದಾಗ ಶ್ರೀಲಂಕಾ 153 ರನ್‌ಗೆ 7ನೆ ವಿಕೆಟ್ ಕಳೆದುಕೊಂಡಿತು. ಆಗ ಚಾಮರ ಕಪುಗಡೆರಾ ಹಾಗೂ ನುವಾನ್ ಕುಲಸೇಕರಗೆ ತಂಡವನ್ನು ಗೆಲುವಿನ ದಡ ಸೇರಿಸಬೇಕಾದ ಒತ್ತಡ ಎದುರಾಯಿತು.

  ಶ್ರೀಲಂಕಾದ ಗೆಲುವಿಗೆ ಕೊನೆಯ ಓವರ್‌ನಲ್ಲಿ 13 ರನ್ ಅಗತ್ಯವಿತ್ತು. ನಾಯಕ ವಿಲಿಯಮ್ಸನ್ ಕಳೆದ ವರ್ಷ ವಿಶ್ವಕಪ್‌ನ ಹೀರೋ ಗ್ರಾಂಟ್ ಎಲಿಯಟ್‌ಗೆ ಚೆಂಡನ್ನು ನೀಡಿದರು. ಮೊದಲ ಎರಡು ಎಸೆತಗಳಲ್ಲಿ 3 ರನ್ ನೀಡಿದ ಎಲಿಯಟ್ ಅವರು 3ನೆ ಎಸೆತದಲ್ಲಿ ಕುಲಸೇಕರ ವಿಕೆಟ್ ಕಬಳಿಸಿದರು. 4ನೆ ಎಸೆತದಲ್ಲಿ ಕಪುಗಡೆರಾ ರನೌಟ್ ಆದರು. ಆಗ ಒತ್ತಡಕ್ಕೆ ಸಿಲುಕಿದ ಲಂಕಾ ಉಳಿದ ಎರಡು ಎಸೆತಗಳಲ್ಲಿ 5 ರನ್ ಗಳಿಸಿದರೂ ಕೇವಲ 3 ರನ್‌ನಿಂದ ಸೋಲೊಪ್ಪಿಕೊಂಡಿತು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲೆಂಡ್‌ನ ಪರ ಗಪ್ಟಿಲ್ ಏಳನೆ ಟ್ವೆಂಟಿ-20 ಅರ್ಧಶತಕ ಸಿಡಿಸಿ ಶ್ರೇಷ್ಠ ಫಾರ್ಮ್ ಮುಂದುವರಿಸಿದರು. ನುವಾನ್ ಕಪುಗಡೆರಾ ನೇರ ಎಸೆತದಲ್ಲಿ ರನೌಟಾದ ಗಪ್ಟಿಲ್ 34 ಎಸೆತಗಳಲ್ಲಿ ತಲಾ ನಾಲ್ಕು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದರು.

 ಮೂರನೆ ಟ್ವೆಂಟಿ-20 ಅರ್ಧಶತಕ ಸಿಡಿಸಿದ ವಿಲಿಯಮ್ಸನ್ 42 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಿಡಿಸಿ ಕುಲಸೇಖರಗೆ ವಿಕೆಟ್ ಒಪ್ಪಿಸಿದರು.

ಸಂಕ್ಷಿಪ್ತ ಸ್ಕೋರ್

ನ್ಯೂಝಿಲೆಂಡ್: 20 ಓವರ್‌ಗಳಲ್ಲಿ 182/4

(ಗಪ್ಟಿಲ್ 58, ವಿಲಿಯಮ್ಸನ್ 53, ಮುನ್ರೊ 36, ಟೇಲರ್ ಔಟಾಗದೆ 22, ಕುಲಸೇಕರ 2-26)

ಶ್ರೀಲಂಕಾ: 20 ಓವರ್‌ಗಳಲ್ಲಿ 179/9

(ಗುಣತಿಲಕ 46, ಸಿರಿವರ್ಧನ 42, ಪೆರೇರ 28, ಹೆನ್ರಿ 3-44, ಬೌಲ್ಟ್ 3-21)

ಪಂದ್ಯಶ್ರೇಷ್ಠ: ಟ್ರೆಂಟ್ ಬೌಲ್ಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News