×
Ad

ಮುಹಮ್ಮದ್ ಆಮಿರ್‌ಗೆ ನ್ಯೂಝಿಲೆಂಡ್ ವೀಸಾ

Update: 2016-01-07 23:53 IST

ವೆಲ್ಲಿಂಗ್ಟನ್, ಜ.7: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ಹೊರತಾಗಿಯೂ ಪಾಕಿಸ್ತಾನದ ವೇಗದ ಬೌಲರ್ ಮುಹಮ್ಮದ್ ಆಮಿರ್‌ಗೆ ಮುಂದಿನ ತಿಂಗಳು ಆರಂಭವಾಗಲಿರುವ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳಲು ವೀಸಾ ನೀಡಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

 2011ರಲ್ಲಿ ಬೆಳಕಿಗೆ ಬಂದ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಆಮಿರ್ ಮೂರು ತಿಂಗಳು ಲಂಡನ್‌ನಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. ಸಕ್ರಿಯ ಕ್ರಿಕೆಟ್‌ಗೆ ವಾಪಸಾಗಿರುವ ಆಮಿರ್ ನ್ಯೂಝಿಲೆಂಡ್ ವಿರುದ್ಧದ ತಲಾ ಮೂರು ಪಂದ್ಯಗಳ ಟ್ವೆಂಟಿ-20 ಹಾಗೂ ಏಕದಿನ ಸರಣಿಗೆ ಪಾಕ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ, ನ್ಯೂಝಿಲೆಂಡ್ ಪ್ರವಾಸ ಕೈಗೊಳ್ಳಲು ವೀಸಾ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇದೀಗ ವೀಸಾ ಲಭಿಸುವುದು ಖಾತ್ರಿಯಾದ ಕಾರಣ ಅವರ ನ್ಯೂಝಿಲೆಂಡ್ ಪ್ರವಾಸಕ್ಕೆ ಎದುರಾಗಿದ್ದ ಅಡ್ಡಿ ನಿವಾರಣೆಯಾಗಿದೆ.

ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಬೆಂಬಲವನ್ನು ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಆಮಿರ್ ತನ್ನ ಹಿಂದಿನ ತಪ್ಪಿಗಾಗಿ ಶಿಕ್ಷೆಯನ್ನು ಅನುಭವಿಸಿದ್ದಾರೆ ಎಂದು ನ್ಯೂಝಿಲೆಂಡ್ ವಲಸೆ ಅಧಿಕಾರಿಗಳು ತಿಳಿಸಿದ್ದಾರೆ.

ಆಮಿರ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಕ್ಕಿ ಬೀಳುವ ಮೊದಲು ಪಾಕಿಸ್ತಾನದ ಶ್ರೇಷ್ಠ ಯುವ ಬೌಲರ್ ಆಗಿದ್ದರು. ಅವರು 14 ಟೆಸ್ಟ್‌ನಲ್ಲಿ 51 ವಿಕೆಟ್, 15 ಏಕದಿನಗಳಲ್ಲಿ 25 ವಿಕೆಟ್ ಹಾಗೂ 18 ಟ್ವೆಂಟಿ-20 ಪಂದ್ಯಗಳಲ್ಲಿ 23 ವಿಕೆಟ್‌ಗಳನ್ನು ಕಬಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News