×
Ad

ಗಿಝಾ ಪಿರಮಿಡ್ ಬಳಿ ಗುಂಡಿನ ದಾಳಿ

Update: 2016-01-08 00:19 IST

ಕೈರೊ, ಜ.7: ಈಜಿಪ್ಟ್‌ನಲ್ಲಿ ಗಿಝಾ ಪಿರಮಿಡ್‌ಗಳು ಹಾಗೂ ಹೊಟೇಲೊಂದರ ಸಮೀಪ ಗುರುವಾರ ಮೋಟಾರ್ ಸೈಕಲ್‌ನಲ್ಲಿ ಬಂದ ಅಜ್ಞಾತ ಬಂದೂಕುಧಾರಿಗಳು ಪ್ರವಾಸಿಗರ ಬಸ್ಸೊಂದನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಅಲ್ ಹರಂ ರಸ್ತೆಯಲ್ಲಿರುವ ಹೊಟೇಲ್‌ಗೆ ಪ್ರವಾಸಿಗರು ಪ್ರವೇಶಿಸುತ್ತಿರುವುದನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಾವುನೋವಿನ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಯಾಗಿಲ್ಲವೆನ್ನಲಾಗಿದೆ. ದಾಳಿಯಿಂದ ಬಸ್ ಹಾಗೂ ಹೊಟೇಲ್‌ನ ಗೋಡೆಗೆ ಸ್ವಲ್ಪ ಮಟ್ಟಿನ ಹಾನಿಯುಂಟಾಗಿದೆ. ದಾಳಿಕಾರರ ಪತ್ತೆಗಾಗಿ ಭದ್ರತಾ ಪಡೆಗಳು ಶೋಧಕಾರ್ಯ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

  ಈಜಿಪ್ಟ್‌ನ ಕಾಪ್ಟಿಕ್ ಆರ್ಥೊಡಾಕ್ಸ್ ಕ್ರಿಶ್ಚಿಯನ್ ಸಮುದಾಯವು ಕ್ರಿಸ್‌ಮಸ್ ಆಚರಿಸುತ್ತಿದ್ದ ಸಂದರ್ಭದಲ್ಲೇ ಪ್ರವಾಸಿಗರ ಮೇಲಿನ ಈ ದಾಳಿ ನಡೆದಿದೆ ಎಂದು ವರದಿಗಳು ತಿಳಿಸಿವೆ. ಹುಸ್ನಿ ಮುಬಾರಕ್ 2011ರ ಜನವರಿಯಲ್ಲಿ ಅಧ್ಯಕ್ಷ ಪದವಿಯಿಂದ ಉಚ್ಚಾಟನೆಗೊಂಡ ಬಳಿಕ ಈಜಿಪ್ಟ್ ನಲ್ಲಿ ಹಲವು ಹಿಂಸಾತ್ಮಕ ದಾಳಿಗಳು ಸಂಭವಿಸಿದ್ದು, ಪ್ರಮುಖವಾಗಿ ಸಿನಾಯ್ ಪ್ರಾಂತದಲ್ಲಿ ಬಂಡುಕೋರರ ವಿರುದ್ಧ ಭದ್ರತಾ ಪಡೆಗಳು ಈಗಲೂ ಹೋರಾಟದಲ್ಲಿ ನಿರತವಾಗಿವೆ.

ಹುಸ್ನಿ ಮುಬಾರಕ್ 2013ರಲ್ಲಿ ಅಧ್ಯಕ್ಷ ಪದವಿಯಿಂದ ಉಚ್ಚಾಟಿಸಲ್ಪಟ್ಟ ಬಳಿಕ ಈಜಿಪ್ಟ್‌ನಲ್ಲಿ ಪೊಲೀಸ್ ಠಾಣೆಗಳು ಹಾಗೂ ಸೇನಾ ನೆಲೆಗಳನ್ನು ಗುರಿಯಾಗಿಸಿ ಬಂಡುಕೋರರು ನಡೆಸುತ್ತಿರುವ ದಾಳಿಗಳ ಪ್ರಮಾಣ ಅಧಿಕವಾಗಿದೆ.

ಉ.ಕೊರಿಯ ಹೈಡ್ರೋಜನ್ ಬಾಂಬ್ ಪರೀಕ್ಷೆಯಿಂದ ಪಾಕ್‌ನ ಪರಮಾಣು ಪ್ರಸರಣ ದಾಖಲೆ ಬಹಿರಂಗ ವಾಷಿಂಗ್ಟನ್, ಜ.7: ಪಾಕಿಸ್ತಾನದ ಅಣ್ವಸ್ತ್ರ ಪ್ರಸರಣ ಇತಿಹಾಸ ಹಾಗೂ ಪರಮಾಣು ಅಸ್ತ್ರಗಳನ್ನು ಹೊಂದುವಲ್ಲಿ ನೆರವಾಗಲು ಉತ್ತರಕೊರಿಯದಂತಹ ರಾಷ್ಟ್ರದೊಂದಿಗೆ ಸಂಬಂಧ ಹೊಂದಿದ್ದ ಬಗ್ಗೆ ತಿಂಗಳೊಂದರ ಹಿಂದೆಯೇ ಅಮೆರಿಕದ ಹಿರಿಯ ಸಂಸದರು ಹಾಗೂ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದರು ಎಂದು ವರದಿಯೊಂದು ತಿಳಿಸಿದೆ.

ಉತ್ತರ ಕೊರಿಯವು ಯಶಸ್ವಿ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸುವುದಕ್ಕೆ ಮುಂಚೆಯೇ ಅಮೆರಿಕದ ಸಂಸದರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

ಪಾಕಿಸ್ತಾನದೊಂದಿಗೆ ನಾಗರಿಕ ಪರಮಾಣು ಒಪ್ಪಂದ ಏರ್ಪಡಿಸುವ ಪ್ರಸ್ತಾಪವೊಂದು ಚರ್ಚೆಗೆ ಬಂದಿದ್ದ ವೇಳೆ ಅಮೆರಿಕದ ಸಂಸದರು ಅದನ್ನು ವಿರೋಧಿಸಿದ್ದರು.

 ಉತ್ತರ ಕೊರಿಯ ಹಾಗೂ ಲಿಬಿಯದಂತಹ ರಾಷ್ಟ್ರಗಳಿಗೆ ಪಾಕಿಸ್ತಾನದ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಈ ಹಿಂದೆ ಸೂಕ್ಷ್ಮ ಪರಮಾಣು ತಂತ್ರಜ್ಞಾನಗಳನ್ನು ವಿನಿಮಯ ಮಾಡಿಕೊಂಡಿದ್ದರೆಂಬ ಕಾರಣಕ್ಕೆ ಪಾಕ್‌ನೊಂದಿಗೆ ಪ್ರಸ್ತಾಪಿತ ನಾಗರಿಕ ಅಣು ಒಪ್ಪಂದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದರು.

ಪಾಕ್‌ನ ಅಣುವಿಜ್ಞಾನಿ ಎ.ಕ್ಯೂ.ಖಾನ್ ಕಾರ್ಯಜಾಲವು ಜಗತ್ತಿನ ಬಹುತೇಕ ಅಸ್ಥಿರ ರಾಷ್ಟ್ರಗಳಿಗೆ ಸೂಕ್ಷ್ಮ ಪರಮಾಣು ತಂತ್ರಜ್ಞಾನಗಳನ್ನು ಮಾರಾಟ ಮಾಡಿತ್ತೆಂದು ನಂಬಲಾಗಿದೆ.

ಹೆಚ್ಚಿನ ನಿರ್ಬಂಧಕ್ಕೆ ಅಮೆರಿಕ ಪರಿಶೀಲನೆ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿರುವ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಉತ್ತರ ಕೊರಿಯದ ವಿರುದ್ಧ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಅಮೆರಿಕ ಪರಿಶೀಲನೆ ನಡೆಸಿದೆ. ತಾನು ನಡೆಸುತ್ತಿರುವ ಹೈಡ್ರೋಜನ್ ಬಾಂಬ್ ಪರೀಕ್ಷೆಯು ಅಮೆರಿಕದ ಉದ್ಧಟತನದ ವಿರುದ್ಧದ ಪ್ರತಿಕ್ರಿಯೆಯಾಗಿದೆ ಎಂದು ಉತ್ತರಕೊರಿಯ ನೀಡಿರುವ ಹೇಳಿಕೆಯನ್ನು ಅದು ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News