ಒಡಿಶಾ ವಿರುದ್ಧ ಕರ್ನಾಟಕ ತಂಡಕ್ಕೆ ಜಯ

Update: 2016-01-08 18:16 GMT

ಸೈಯದ್ ಮುಶ್ತಾಕ್ ಅಲಿ ಟ್ರೋಫಿ

 ಕಟಕ್, ಜ.8: ಇಲ್ಲಿ ನಡೆದ ಸೈಯದ್ ಮುಶ್ತಾಕ್ ಅಲಿ ಟ್ರೋಫಿ ‘ಡಿ’ ಗ್ರೂಪ್‌ನ ಪಂದ್ಯದಲ್ಲಿ ಕರ್ನಾಟಕ ಒಡಿಶಾ ವಿರುದ್ಧ 6 ವಿಕೆಟ್‌ಗಳ ಜಯ ಗಳಿಸಿದೆ.

ಬಾರಬತಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 103 ರನ್‌ಗಳ ಸವಾಲನ್ನು ಪಡೆದ ಕರ್ನಾಟಕ ತಂಡ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ 106 ರನ್ ಗಳಿಸಿತು.

ರಾಬಿನ್ ಉತ್ತಪ್ಪ (48) ಮತ್ತು ಸ್ಟುವರ್ಟ್ ಬಿನ್ನಿ (ಔಟಾಗದೆ 32) ಕರ್ನಾಟಕ ತಂಡಕ್ಕೆ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.

ಕರ್ನಾಟಕ ತಂಡದ ಅಗ್ರ ಸರದಿಯ ಮೂರು ವಿಕೆಟ್‌ಗಳನ್ನು 6.4 ಓವರ್‌ಗಳಲ್ಲಿ 37 ರನ್‌ಗಳಿಗೆ ಕಳೆದುಕೊಂಡಿದ್ದರೂ, ಬಳಿಕ ಉತ್ತಪ್ಪ ಮತ್ತು ಬಿನ್ನಿ ನಾಲ್ಕನೆ ವಿಕೆಟ್‌ಗೆ 53 ರನ್ ಸೇರಿಸಿದರು.

ಉತ್ತಪ್ಪ 59 ನಿಮಿಷಗಳ ಬ್ಯಾಟಿಂಗ್‌ನಲ್ಲಿ 41 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 48 ರನ್ ಗಳಿಸಿದರು. ಬಿನ್ನಿ 44 ನಿಮಿಷಗಳ ಬ್ಯಾಟಿಂಗ್‌ನಲ್ಲಿ 30 ಎಸೆತಗಳನ್ನು ಉತ್ತರಿಸಿದರು. 2 ಬೌಂಡರಿ ಮತ್ತು 1 ಸಿಕ್ಸರ್ ಇರುವ 32ರನ್ ಗಳಿಸಿ ಅಜೇಯರಾಗಿ ಉಳಿದರು.

ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಒಡಿಶಾ ತಂಡ 85 ನಿಮಿಷಗಳ ಬ್ಯಾಟಿಂಗ್‌ನಲ್ಲಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 102 ರನ್ ಗಳಿಸಿತ್ತು.

 ಕೆ.ಸಿ. ಕಾರಿಯಪ್ಪ (2-14), ಎಸ್.ಗೋಪಾಲ್(2-15), ಅಭಿಮನ್ಯು ಮಿಥುನ್(2-13) ಮತ್ತು ಎಸ್.ಅರವಿಂದ್(1-31) ಒಡಿಶಾ ತಂಡ ದೊಡ್ಡ ಮೊತ್ತ ಸಂಪಾದಿಸದಂತೆ ತಡೆಯೊಡ್ಡಿದರು.

 ಸರಾಂಗಿ (11), ಸಮಂಟ್ರಾಯ್(19), ಅಭಿಷೇಕ್ ಯಾದವ್(31), ಎ.ಕೆ.ಶಾವೂ (ಔಟಾಗದೆ 17) ಎರಡಂಕೆಯ ಸ್ಕೋರ್ ದಾಖಲಿಸಿದರು.

ಸಂಕ್ಷಿಪ್ತ ಸ್ಕೋರ್ 

ಒಡಿಶಾ 20 ಓವರ್‌ಗಳಲ್ಲಿ 102/7(ಅಭಿಷೇಕ್ ಯಾದವ್ 31, ಎಕೆ ಶಾವೊ ಔಟಾಗದೆ 17; ಮಿಥುನ್ 2-13)

ಕರ್ನಾಟಕ 17.5 ಓವರ್‌ಗಳಲ್ಲಿ 106/4(ಉತ್ತಪ್ಪ 48, ಬಿನ್ನಿ ಔಟಾಗದೆ 32; ಶಾವೊ 2-17).

ಉತ್ತರ ಪ್ರದೇಶಕ್ಕೆ ಏಕಲವ್ಯ ಆಸರೆ

 ಕಟಕ್, ಜ.8: ನಾಯಕ ಏಕಲವ್ಯ ದ್ವಿವೇದಿ ಬಾರಿಸಿದ ಅರ್ಧಶತಕದ(89 ರನ್, 53 ಎಸೆತ) ನೆರವಿನಿಂದ ಉತ್ತರ ಪ್ರದೇಶ ತಂಡ ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಿಯಲ್ಲಿ ಸರ್ವಿಸಸ್ ತಂಡವನ್ನು 57 ರನ್‌ಗಳಿಂದ ಸುಲಭವಾಗಿ ಮಣಿಸಿದೆ. ಇಲ್ಲಿನ ಬಾರಬತಿ ಸ್ಟೇಡಿಯಂನಲ್ಲಿ ಶುಕ್ರವಾರ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಉತ್ತರಪ್ರದೇಶ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದಿದ್ದ ಸರ್ವಿಸಸ್ ತಂಡ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಶಕ್ತವಾಯಿತು.

ಅರ್ಧಶತಕ ಸಿಡಿಸಿದ ದ್ವಿವೇದಿ(89 ರನ್, 53 ಎಸೆತ, 8 ಬೌಂಡರಿ, 5 ಸಿಕ್ಸರ್)ಆರಂಭಿಕ ದಾಂಡಿಗ ಪ್ರಶಾಂತ್ ಗುಪ್ತಾ(43) ಅವರೊಂದಿಗೆ 3ನೆ ವಿಕೆಟ್‌ಗೆ 109 ರನ್ ಜೊತೆಯಾಟ ನಡೆಸಿ ತಂಡ ಸ್ಪರ್ಧಾತ್ಮಕ ಸ್ಕೋರ್ ದಾಖಲಿಸಲು ನೆರವಾದರು.

ರೋಶನ್ ರಾಜ್(3-42) ಸರ್ವಿಸಸ್ ತಂಡದ ಯಶಸ್ವಿ ಬೌಲರ್ ಎನಿಸಿಕೊಂಡರು.

ಗೆಲುವಿಗೆ ಕಠಿಣ ಸವಾಲು ಬೆನ್ನಟ್ಟಿದ ಸರ್ವಿಸಸ್‌ನ ಪರ ಯಶ್ಪಾಲ್ ಸಿಂಗ್(47ರನ್, 32 ಎಸೆತ) ಹಾಗೂ ವಿಕಾಸ್ ಹಥ್ವಾಲಾ(31 ರನ್, 33 ಎಸೆತ) ಹೊರತುಪಡಿಸಿ ಉಳಿದ ದಾಂಡಿಗರು ವಿಫಲರಾದರು. ಯುಪಿ ಪರ ಸೌರಭ್ ಕುಮಾರ್, ಅಂಕಿತ್ ರಾಜ್‌ಪುರ್, ಪಿಯೂಷ್ ಚಾವ್ಲಾ ಹಾಗೂ ಕುಲ್‌ದೀಪ್ ಯಾದವ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News