ಟ್ವೆಂಟಿ-20 ಅಭ್ಯಾಸ ಪಂದ್ಯ:ಧೋನಿ ಪಡೆ ಶುಭಾರಂಭ

Update: 2016-01-08 18:20 GMT

ವೆಸ್ಟರ್ನ್ ಆಸ್ಟ್ರೇಲಿಯ ವಿರುದ್ಧ ಜಯ

ಪರ್ತ್, ಜ.8: ಆಸ್ಟ್ರೇಲಿಯ ಪ್ರವಾಸದಲ್ಲಿರುವ ಭಾರತ ತಂಡ ವೆಸ್ಟರ್ನ್ ಆಸ್ಟ್ರೇಲಿಯ ಇಲೆವೆನ್ ವಿರುದ್ಧದ ಟ್ವೆಂಟಿ-20 ಅಭ್ಯಾಸ ಪಂದ್ಯವನ್ನು 74 ರನ್‌ಗಳ ಅಂತರದಿಂದ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ.

ಇಲ್ಲಿನ ವಾಕಾ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 4 ವಿಕೆಟ್‌ಗಳ ನಷ್ಟಕ್ಕೆ 192 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ವೆಸ್ಟರ್ನ್ ಆಸ್ಟ್ರೇಲಿಯ ತಂಡ ಭಾರತದ ಯುವ ವೇಗಿ ಬರೀಂದರ್ ಬಲ್ಬೀರ್ ಸಿಂಗ್(2-24), ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ(2-13) ಹಾಗೂ ಅಕ್ಷರ್ ಪಟೇಲ್(2-13) ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 118 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ವೆಸ್ಟರ್ನ್ ಆಸ್ಟ್ರೇಲಿಯದ ಪರ ಆರಂಭಿಕ ದಾಂಡಿಗ ಬಿರ್ಟ್ ಔಟಾಗದೆ 74 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಉಳಿದ ದಾಂಡಿಗರು ದೊಡ್ಡ ಸ್ಕೋರ್ ಗಳಿಸಲು ವಿಫಲರಾದರು.

ಟ್ವೆಂಟಿ-20 ಪಂದ್ಯದಲ್ಲಿ ಉಭಯ ತಂಡಗಳು ಮೂವರು ದಾಂಡಿಗರು ತಲಾ 74 ರನ್ ಗಳಿಸಿದ್ದು ವಿಶೇಷ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತದ ಪರ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ತಲಾ 74 ರನ್ ಗಳಿಸಿದ್ದರು.

ಭಾರತ 192/4: ಇದಕ್ಕೆ ಮೊದಲು ವಾಕಾ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಭಾರತ ನಾಯಕ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿದ ಶಿಖರ್ ಧವನ್(74) ಹಾಗೂ ವಿರಾಟ್ ಕೊಹ್ಲಿ(74) ಎದುರಾಳಿ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿ 4 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಲು ನೆರವಾದರು.

ಆರಂಭಿಕ ದಾಂಡಿಗ ರೋಹಿತ್ ಶರ್ಮ ಕೇವಲ 6 ರನ್‌ಗೆ ಔಟಾಗಿ ನಿರಾಸೆಗೊಳಿಸಿದರು. ಆಗ ಜೊತೆಯಾದ ಉಪ ನಾಯಕ ಕೊಹ್ಲಿ(74 ರನ್, 44 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ಶಿಖರ್ ಧವನ್(74 ರನ್, 46 ಎಸೆತ, 8 ಬೌಂಡರಿ, 3 ಸಿಕ್ಸರ್) 10.51 ರನ್‌ರೇಟ್‌ನಲ್ಲಿ 149 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ಕೊಹ್ಲಿ ಹಾಗೂ ಧವನ್ ಔಟಾದ ನಂತರ ಬಂದ ಅಜಿಂಕ್ಯ ರಹಾನೆ(2) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ನಾಲ್ಕನೆ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ನಾಯಕ ಧೋನಿ(ಔಟಾಗದೆ 22 ರನ್, 14 ಎಸೆತ, 1 ಬೌಂಡರಿ, 2 ಸಿಕ್ಸರ್) ಭಾರತದ ಸ್ಕೋರನ್ನು 190ರ ಗಡಿ ದಾಟಿಸಿದರು.

ಭಾರತ ಶನಿವಾರ 50 ಓವರ್‌ಗಳ ಅಭ್ಯಾಸ ಪಂದ್ಯವನ್ನು ಆಡಲಿದೆ.

ಸಂಕ್ಷಿಪ್ತ ಸ್ಕೋರ್

ಭಾರತ: 20 ಓವರ್‌ಗಳಲ್ಲಿ 192/4

(ಶಿಖರ್ ಧವನ್ 74, ವಿರಾಟ್ ಕೊಹ್ಲಿ 74, ಎಂಎಸ್ ಧೋನಿ ಔಟಾಗದೆ 22, ಡುಫೀಲ್ಡ್ 1-21)

ವೆಸ್ಟರ್ನ್ ಆಸ್ಟ್ರೇಲಿಯ ಇಲೆವೆನ್: 20 ಓವರ್‌ಗಳಲ್ಲಿ 118/6

(ಬಿರ್ಟ್ ಔಟಾಗದೆ 74, ಬರೀಂದರ್ ಸಿಂಗ್ 2-24, ಜಡೇಜ 2-13, ಅಕ್ಷರ್ ಪಟೇಲ್ 2-13)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News