×
Ad

ಕತರ್ ಓಪನ್: ಜೊಕೊವಿಕ್, ನಡಾಲ್ ಸೆಮಿಗೆ

Update: 2016-01-08 23:51 IST

ದೋಹಾ, ಜ.8: ಅಗ್ರ ಶ್ರೇಯಾಂಕಿತ ನೊವಾಕ್ ಜೊಕೊವಿಕ್ ಕತರ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದಾರೆ.

ಗುರುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸರ್ಬಿಯದ ಜೊಕೊವಿಕ್ ಅವರು 8ನೆ ಶ್ರೇಯಾಂಕದ, ಅರ್ಜೆಂಟೀನದ ಆಟಗಾರ ಲಿಯೊನಾರ್ಡೊ ಮಯೆರ್‌ರನ್ನು 6-3,7-5 ಸೆಟ್‌ಗಳಿಂದ ಮಣಿಸಿದರು.

ಜೊಕೊವಿಕ್ ಸೆಮಿಫೈನಲ್‌ನಲ್ಲಿ ಝೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್‌ರನ್ನು ಎದುರಿಸಲಿದ್ದಾರೆ. ಬೆರ್ಡಿಕ್ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಬ್ರಿಟನ್‌ನ ಕೈಲ್ ಎಡ್ಮಂಡ್‌ರನ್ನು 6-3, 6-2 ಸೆಟ್‌ಗಳಿಂದ ಮಣಿಸಿದ್ದಾರೆ.

ಇದೇ ವೇಳೆ, ದ್ವಿತೀಯ ಶ್ರೇಯಾಂಕಿತ ಆಟಗಾರ ಸ್ಪೇನ್‌ನ ರಫೆಲ್ ನಡಾಲ್ ರಶ್ಯದ ಆ್ಯಂಡ್ರಿ ಕುಝ್ನೆಸೋವರನ್ನು 6-3, 5-7, 6-4 ಸೆಟ್‌ಗಳಿಂದ ಸೋಲಿಸುವುದರೊಂದಿಗೆ ಅಂತಿಮ ನಾಲ್ಕರ ಹಂತವನ್ನು ತಲುಪಿದ್ದಾರೆ.

ನಡಾಲ್ ಮುಂದಿನ ಸುತ್ತಿನಲ್ಲಿ ಇಲಿಯಾ ಮರ್ಚೆಂಕೊರನ್ನು ಎದುರಿಸಲಿದ್ದಾರೆ. ಉಕ್ರೇನ್‌ನ ಮರ್ಚೆಂಕೊ ಅಂತಿಮ 8ರ ಪಂದ್ಯದಲ್ಲಿ 7ನೆ ಶ್ರೇಯಾಂಕದ ಜೆರೆಮಿ ಚಾರ್ಡಿಯವರನ್ನು 6-3, 7-6(3) ಸೆಟ್‌ಗಳಿಂದ ಮಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News