×
Ad

ಆಸ್ಟ್ರೇಲಿಯ ಸರಣಿಯಿಂದ ಮುಹಮ್ಮದ್ ಶಮಿ ಔಟ್ ಭುವನೇಶ್ವರ ಕುಮಾರ್‌ಗೆ ಬುಲಾವ್

Update: 2016-01-09 18:04 IST

ಹೊಸದಿಲ್ಲಿ, ಜ.9: ಭಾರತದ ಪ್ರಮುಖ ವೇಗದ ಬೌಲರ್ ಮುಹಮ್ಮದ್ ಶಮಿ ಮಂಡಿನೋವಿನ ಕಾರಣ ಆಸ್ಟ್ರೇಲಿಯ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿದಿದ್ದಾರೆ. ಶಮಿ ಬದಲಿ ಆಟಗಾರನಾಗಿ ಭುವನೇಶ್ವರ ಕುಮಾರ್ ತಂಡವನ್ನು ಸೇರ್ಪಡೆಯಾಗಲಿದ್ದಾರೆ.

 ಕೋಲ್ಕತಾದ ವೇಗದ ಬೌಲರ್ ಶಮಿ ಇತ್ತೀಚೆಗಷ್ಟೇ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು 9 ತಿಂಗಳ ಬಳಿಕ ಟೀಮ್ ಇಂಡಿಯಾಕ್ಕೆ ವಾಪಸಾಗಿದ್ದರು. ಇದೀಗ ಮತ್ತೊಮ್ಮೆ ಗಾಯದ ಸಮಸ್ಯೆಗೆ ಸಿಲುಕಿರುವ ಶಮಿ ಮುಂದಿನ ನಾಲ್ಕರಿಂದ ಆರು ವಾರಗಳ ಕಾಲ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ‘‘ಶಮಿಗೆ ಮತ್ತೊಮ್ಮೆ ಗಾಯದ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರು ಆಸ್ಟ್ರೇಲಿಯ ಪ್ರವಾಸದಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐನ ವೈದ್ಯಕೀಯ ತಂಡ ಶನಿವಾರ ಖಚಿತಪಡಿಸಿದೆ. ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿ ಭುವನೇಶ್ವರ ಕುಮಾರ್‌ರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿದ್ದು, ಕುಮಾರ್ ಶೀಘ್ರವೇ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ’’ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಆಸ್ಟ್ರೇಲಿಯದ ಪರ್ತ್‌ನಲ್ಲಿ ನೆಟ್ ಪ್ರಾಕ್ಟೀಸ್ ನಡೆಸುತ್ತಿದ್ದಾಗಲೇ ಶಮಿಗೆ ಮಂಡಿನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ಶುಕ್ರವಾರ ನಡೆದ ಪಶ್ಚಿಮ ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ಅಭ್ಯಾಸ ಪಂದ್ಯದಲ್ಲಿ ಆಡಿರಲಿಲ್ಲ. ಶಮಿ 2015ರ ಐಸಿಸಿ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದರೆ, ವಿಶ್ವಕಪ್ ಟೂರ್ನಿಯ ವೇಳೆಯೇ ಮಂಡಿನೋವು ಕಾಣಿಸಿಕೊಂಡಿತ್ತು. ವಿಶ್ವಕಪ್‌ನ ನಂತರ ಮಂಡಿಯ ಶಸ್ತ್ರಚಿಕಿತ್ಸೆಗೆ ಒಳಗಾದ ಶಮಿ 8 ತಿಂಗಳಿಗೂ ಅಧಿಕ ಕಾಲ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೀಗ ಮತ್ತೊಮ್ಮೆ ಗಾಯದ ಸಮಸ್ಯೆಗೆ ತುತ್ತಾಗಿರುವ ಶಮಿ ವೃತ್ತಿಜೀವನದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಇತ್ತೀಚೆಗೆ ವಿಜಯ್ ಹಝಾರೆ ಏಕದಿನ ಟೂರ್ನಿಯಲ್ಲಿ ಬಂಗಾಳ ತಂಡದಲ್ಲಿ ಆಡುವ ಮೂಲಕ ಶಮಿ ಕ್ರಿಕೆಟ್‌ಗೆ ವಾಪಸಾಗಿದ್ದರು. ಆಸ್ಟ್ರೇಲಿಯ ಪ್ರವಾಸದಲ್ಲಿ ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದರು.

ಶಮಿ ಔಟ್, ಭುವಿ ಇನ್:

 ಶಮಿ ಸರಣಿಯಿಂದ ಹೊರಗುಳಿದಿರುವುದು ಭುವನೇಶ್ವರ್‌ಗೆ ಅನಿರೀಕ್ಷಿತ ಅವಕಾಶವನ್ನು ಕಲ್ಪಿಸಿದೆ. ಕಳೆದ ವರ್ಷ ದಕ್ಷಿಣ ಆಫ್ರಿಕ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಹಿನ್ನೆಲೆಯಲ್ಲಿ ಕುಮಾರ್ ತಂಡದಿಂದ ಕೈಬಿಡಲ್ಪಟ್ಟಿದ್ದರು. ಶಮಿ ಸ್ಥಾನ ತುಂಬಲು ಕುಮಾರ್ ಹಾಗೂ ಗುಜರಾತ್‌ನ ಯುವ ವೇಗಿ ಜಸ್ಪ್ರೀತ್ ಬುಮ್ರಾ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು, ಅಂತಿಮವಾಗಿ ಆಯ್ಕೆಗಾರರು ಕುಮಾರ್‌ಗೆ ಮಣೆ ಹಾಕಿದರು.

........

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News