×
Ad

ಟ್ವೆಂಟಿ-20: ಝಿಂಬಾಬ್ವೆ ವಿರುದ್ಧ ಅಫ್ಘಾನಿಸ್ತಾನಕ್ಕೆ ರೋಚಕ ಜಯ

Update: 2016-01-09 23:25 IST

ಶಾರ್ಜಾ, ಜ.9: ಅತ್ಯಂತ ರೋಚಕ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಝಿಂಬಾಬ್ವೆ ತಂಡವನ್ನು 5 ರನ್‌ಗಳ ಅಂತರದಿಂದ ಮಣಿಸಿತು. ಈ ಗೆಲುವಿನ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಶುಕ್ರವಾರ ಇಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದ ಗೆಲುವಿಗೆ 188 ರನ್ ಗುರಿ ಪಡೆದ ಝಿಂಬಾಬ್ವೆ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಝಿಂಬಾಬ್ವೆಗೆ ಅಂತಿಮ ಎಸೆತದಲ್ಲಿ ಗೆಲುವಿಗೆ 6 ರನ್ ಅಗತ್ಯವಿತ್ತು. ಸ್ಟ್ರೈಕ್‌ನಲ್ಲಿದ್ದ ಲೂಕ್ ಜಾಂಗ್ವೆ(11) ಅಫ್ಘಾನ್‌ನ ವೇಗದ ಬೌಲರ್ ದೌಲತ್ ಝದ್ರಾನ್ ಎಸೆದ ಅಂತಿಮ ಓವರ್‌ನ ಅಂತಿಮ ಎಸೆತದಲ್ಲಿ ಔಟಾಗುವುದರೊಂದಿಗೆ ಝಿಂಬಾಬ್ವೆ ಕೇವಲ 5 ರನ್‌ನಿಂದ ಸೋಲೊಪ್ಪಿಕೊಂಡಿತು.

 ಜಾಂಗ್ವೆ ಅವರು ಝದ್ರಾನ್ ಎಸೆದ ಕೊನೆಯ ಓವರ್‌ನ 3 ಹಾಗೂ 4ನೆ ಎಸೆತದಲ್ಲಿ ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದ್ದರು. ಆದರೆ, ಕೊನೆಯ ಎಸೆತದಲ್ಲಿ ದೊಡ್ಡ ಹೊಡೆತ ಬಾರಿಸಲು ವಿಫಲರಾದರು. ಝದ್ರಾನ್ 20ನೆ ಓವರ್‌ನಲ್ಲಿ 15 ರನ್ ನೀಡಿದ್ದರು.

ಝದ್ರಾನ್ ತನ್ನ ಕೊನೆಯ ಓವರ್‌ನಲ್ಲಿ ಎರಡು ಬಾರಿ ನೋ-ಬಾಲ್ ಎಸೆದರೂ ಬೌಲಿಂಗ್ ಮುಂದುವರಿಸಲು ಅವಕಾಶ ನೀಡಿದ ಅಂಪೈರ್‌ಗಳು ವಿವಾದಾಸ್ಪದ ನಿರ್ಧಾರ ಕೈಗೊಂಡರು.

ಝಿಂಬಾಬ್ವೆಯ ಪರ ಮಾಲ್ಕಂ ವಾಲ್ಲರ್(ಔಟಾಗದೆ 49 ರನ್, 37 ಎಸೆತ, 2 ಬೌಂಡರಿ, 2 ಸಿಕ್ಸರ್) ಅಗ್ರ ಸ್ಕೋರರ್ ಎನಿಸಿಕೊಂಡರು. ಅಫ್ಘಾನ್‌ನ ಪರ ಝದ್ರಾನ್(3-32) ಯಶಸ್ವಿ ಬೌಲರ್ ಎನಿಸಿಕೊಂಡರು.

ಅಫ್ಘಾನಿಸ್ತಾನ 182/7: ಇದಕ್ಕೆ ಮೊದಲು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟದಲ್ಲಿ 187 ರನ್ ಗಳಿಸಿತು.

ಉಸ್ಮಾನ್ ಘನಿ(42ರನ್, 38 ಎಸೆತ, 5 ಬೌಂಡರಿ, 1 ಸಿಕ್ಸರ್) ಅಗ್ರ ಸ್ಕೋರರ್ ಎನಿಸಿಕೊಂಡರು. ಗುಲ್ಬದಿನ್ ನಾಯಿಬ್(37), ನಾಯಕ ಮುಹಮ್ಮದ್ ಶಹಝಾದ್(33) ಉಪಯುಕ್ತ ಕೊಡುಗೆ ನೀಡಿದರು. ಕೇವಲ 20 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್‌ಗಳನ್ನು ಒಳಗೊಂಡ 37 ರನ್ ಗಳಿಸಿ ರನೌಟಾದ ನಾಯಿಬ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಝಿಂಬಾಬ್ವೆಯ ಹಿರಿಯ ಆಫ್-ಸ್ಪಿನ್ನರ್ ಗ್ರೇಮ್ ಕ್ರೀಮರ್(3-17) ಯಶಸ್ವಿ ಬೌಲರ್ ಎನಿಸಿಕೊಂಡರು. ಉಭಯ ತಂಡಗಳು ಶಾರ್ಜಾದಲ್ಲಿ ರವಿವಾರ ಎರಡನೆ ಹಾಗೂ ಅಂತಿಮ ಪಂದ್ಯವನ್ನು ಆಡುತ್ತವೆ.

ಸಂಕ್ಷಿಪ್ತ ಸ್ಕೋರ್

ಅಫ್ಘಾನಿಸ್ತಾನ: 20 ಓವರ್‌ಗಳಲ್ಲಿ 187/7

(ಉಸ್ಮಾನ್ ಘನಿ 42, ಗುಲ್ಬದಿನ್ ನಾಯಿಬ್ 37, ಮುಹಮ್ಮದ್ ಶಹಝಾದ್ 33, ಗ್ರೇಮ್ ಕ್ರೆಮೆರ್ 3-17)

ಝಿಂಬಾಬ್ವೆ: 20 ಓವರ್‌ಗಳಲ್ಲಿ 182/7

(ಮಾಲ್ಕಂ ವಾಲ್ಲರ್ ಔಟಾಗದೆ 49, ಹ್ಯಾಮಿಲ್ಡನ್ ಮಸಕಝ 33, ದೌಲತ್ ಝದ್ರಾನ್ 3-32)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News