ಏಕದಿನ ಅಭ್ಯಾಸ ಪಂದ್ಯ: ಧೋನಿ ಪಡೆಗೆ ಭರ್ಜರಿ ಜಯ
ರೋಹಿತ್, ಮನೀಷ್ ಅರ್ಧಶತಕ
ಪರ್ತ್, ಜ.9: ಆರಂಭಿಕ ದಾಂಡಿಗ ರೋಹಿತ್ ಶರ್ಮ(67 ರನ್) ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಮನೀಷ್ ಪಾಂಡೆ(58) ಅವರ ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಭಾರತ ತಂಡ ಪಶ್ಚಿಮ ಆಸ್ಟ್ರೇಲಿಯ ಇಲೆವೆನ್ ವಿರುದ್ಧದ ಏಕದಿನ ಅಭ್ಯಾಸ ಪಂದ್ಯವನ್ನು 64 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಮೊದಲ ಟ್ವೆಂಟಿ-20 ಅಭ್ಯಾಸ ಪಂದ್ಯವನ್ನು ಜಯಿಸಿದ್ದ ಧೋನಿ ಪಡೆ ಏಕದಿನ ಅಭ್ಯಾಸ ಪಂದ್ಯದಲ್ಲಿ 49.1 ಓವರ್‌ಗಳಲ್ಲಿ 249 ರನ್‌ಗೆ ಆಲೌಟಾಯಿತು. ಭಾರತದ ಬೌಲರ್‌ಗಳು ಆತಿಥೇಯರನ್ನು 49.2 ಓವರ್‌ಗಳಲ್ಲಿ 185 ರನ್‌ಗೆ ಆಲೌಟ್ ಮಾಡಿದರು.
ಶನಿವಾರ ಇಲ್ಲಿನ ವಾಕಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಧೋನಿಯ ನಿರ್ಧಾರವನ್ನು ಸಮರ್ಥಿಸಿದ ರೋಹಿತ್(67 ರನ್, 82 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಮನೀಷ್ ಪಾಂಡೆ(58 ರನ್, 59 ಎಸೆತ, 3 ಬೌಂಡರಿ) ಭಾರತ 49.1 ಓವರ್‌ಗಳಲ್ಲಿ 249 ರನ್ ಗಳಿಸಲು ನೆರವಾದರು.
ಗೆಲ್ಲಲು 250 ರನ್ ಗುರಿ ಪಡೆದಿದ್ದ ಆತಿಥೇಯ ಆಸ್ಟ್ರೇಲಿಯ ತಂಡ ರಿಷಿ ಧವನ್(2-28), ರವೀಂದ್ರ ಜಡೇಜ(2-38), ಆರ್. ಅಶ್ವಿನ್(2-32) ಹಾಗೂ ಅಕ್ಷರ್ ಪಟೇಲ್(2-29) ಅವರ ಸಂಘಟಿತ ದಾಳಿಗೆ ತತ್ತರಿಸಿ 49.2 ಓವರ್‌ಗಳಲ್ಲಿ 185 ರನ್‌ಗೆ ಆಲೌಟಾಯಿತು.
ಆಸ್ಟೇಲಿಯದ ಪರ ಜೆ. ಮೋರ್ಗನ್(50ರನ್) ಹಾಗೂ ಕಾರ್ಡರ್(45) ಎರಡಂಕೆಯ ಸ್ಕೋರ್ ದಾಖಲಿಸಿದರು. ಉಳಿದ ದಾಂಡಿಗರು ದೊಡ್ಡ ಸ್ಕೋರ್ ಗಳಿಸಲು ವಿಫಲರಾದರು.
ಶುಕ್ರವಾರ ಟ್ವೆಂಟಿ-20 ಅಭ್ಯಾಸವನ್ನು ಜಯಿಸಿರುವ ಭಾರತ ಇದೀಗ ಏಕದಿನ ಪಂದ್ಯವನ್ನು ಜಯಿಸುವುದರೊಂದಿಗೆ ಜ.12 ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಸರಣಿಗೆ ಉತ್ತಮ ತಯಾರಿ ನಡೆಸಿದೆ.
ಭಾರತ 249: ಭಾರತ ತಂಡದ ಆರಂಭ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಟ್ವೆಂಟಿ-20 ಅಭ್ಯಾಸ ಪಂದ್ಯದಲ್ಲಿ ಮಿಂಚಿದ್ದ ಆರಂಭಿಕ ದಾಂಡಿಗ ಶಿಖರ್ ಧವನ್(4)ಹಾಗೂ ಉಪ ನಾಯಕ ವಿರಾಟ್ ಕೊಹ್ಲಿ (7) ಬೇಗನೆ ಔಟಾದರು.
ಈ ಇಬ್ಬರು ಔಟಾದಾಗ ಭಾರತದ ಸ್ಕೋರ್ 19 ರನ್ ಆಗಿತ್ತು. ಆಗ 3ನೆ ವಿಕೆಟ್‌ಗೆ 88 ರನ್ ಜೊತೆಯಾಟ ನಡೆಸಿದ ರೋಹಿತ್ ಹಾಗೂ ಅಜಿಂಕ್ಯ ರಹಾನೆ(41) ತಂಡ ಗೌರವಾರ್ಹ ಮೊತ್ತ ಗಳಿಸಲು ನೆರವಾದರು. ಮಧ್ಯಮ ಕ್ರಮಾಂಕದಲ್ಲಿ ಕನ್ನಡಿಗ ಮನೀಷ್ ಪಾಂಡೆ(58) ರವೀಂದ್ರ ಜಡೇಜ(26) ಅವರೊಂದಿಗೆ 7ನೆ ವಿಕೆಟ್‌ಗೆ 60 ರನ್ ಸೇರಿಸಿ ಇನಿಂಗ್ಸ್‌ಗೆ ಚುರುಕು ಮುಟ್ಟಿಸಿದರು.
ಪಾಂಡೆ, ಜಡೇಜ ಔಟಾದ ನಂತರ ಭಾರತದ ಬಾಲಂಗೋಚಿಗಳು ಬೇಗನೆ ಪೆವಿಲಿಯನ್‌ಗೆ ತೆರಳಿದ ಕಾರಣ ತಂಡ 50 ಓವರ್ ಕೊನೆಗೊಳ್ಳುವ ಮೊದಲೇ ಆಲೌಟಾಯಿತು.
ಆಸ್ಟ್ರೇಲಿಯದ ವೇಗದ ಬೌಲರ್ ಡ್ರೀವ್ ಪಾರ್ಟರ್(5-37) ಭಾರತದ ದಾಂಡಿಗರನ್ನು ಕಾಡಿದರು.
ಗೆಲ್ಲಲು ಕಠಿಣ ಗುರಿ ಪಡೆದಿದ್ದ ಆಸ್ಟ್ರೇಲಿಯ ಉಮೇಶ್ ಯಾದವ್ ನೇತೃತ್ವದ ಭಾರತದ ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿ ಸರ್ವಪತನಗೊಂಡಿತು.
ಸಂಕ್ಷಿಪ್ತ ಸ್ಕೋರ್
ಭಾರತ: 49.1 ಓವರ್‌ಗಳಲ್ಲಿ 249/10
(ರೋಹಿತ್ ಶರ್ಮ 67, ಮನೀಷ್ ಪಾಂಡೆ 58, ಪಾರ್ಟರ್ 5-37)
ಪಶ್ಚಿಮ ಆಸ್ಟ್ರೇಲಿಯ: 49.2 ಓವರ್‌ಗಳಲ್ಲಿ 185 ರನ್‌ಗೆ ಆಲೌಟ್
(ಮೊರ್ಗನ್ 50, ಕಾರ್ಡರ್ 45, ರಿಷಿ ಧವನ್ 2-28, ಜಡೇಜ 2-38, ಅಶ್ವಿನ್ 2-32, ಅಕ್ಷರ್ ಪಟೇಲ್ 2-29)