×
Ad

ಕತರ್ ಓಪನ್: ಫೈನಲ್‌ನಲ್ಲಿ ಜೊಕೊವಿಕ್-ನಡಾಲ್ ಸೆಣಸಾಟ

Update: 2016-01-09 23:30 IST

 ದೋಹಾ, ಜ.9: ಕತರ್ ಟೆನಿಸ್ ಓಪನ್‌ನ ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಜಯ ಸಾಧಿಸಿರುವ ನೊವಾಕ್ ಜೊಕೊವಿಕ್ ಹಾಗೂ ರಫೆಲ್ ನಡಾಲ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಈ ಇಬ್ಬರು ದಿಗ್ಗಜ ಆಟಗಾರರು 47ನೆ ಬಾರಿ ಮುಖಾಮುಖಿಯಾಗುತ್ತಿದ್ದು, ಫೈನಲ್‌ನಲ್ಲಿ 24ನೆ ಬಾರಿ ಸೆಣಸಾಡಲಿದ್ದಾರೆ.

ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ಜೊಕೊವಿಕ್ ಝೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್‌ರನ್ನು 6-3, 7-6(7/3) ಸೆಟ್‌ಗಳಿಂದ ಮಣಿಸಿ ಶನಿವಾರ ನಡೆಯಲಿರುವ ಫೈನಲ್ ಸುತ್ತಿಗೆ ತೇರ್ಗಡೆಯಾದರು.

ಸರ್ಬಿಯದ ಜೊಕೊವಿಕ್ ಅವರು ಬೆರ್ಡಿಕ್ ವಿರುದ್ಧ ಆಡಿರುವ 23 ಪಂದ್ಯಗಳ ಪೈಕಿ 21ರಲ್ಲಿ ಗೆಲುವು ಸಾಧಿಸಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ನಡಾಲ್ ಅವರು ಉಕ್ರೇನ್‌ನ ಇಲಿಯಾ ಮರ್ಚೆಂಕೊರನ್ನು 6-3, 6-4 ಸೆಟ್‌ಗಳಿಂದ ಮಣಿಸಿದರು.

ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಜೊಕೊವಿಕ್-ನಡಾಲ್ ಸೆಣಸಾಡಲಿದ್ದು, ಇದು ಆಧುನಿಕ ಟೆನಿಸ್‌ನ ಶ್ರೇಷ್ಠ ಪಂದ್ಯವಾಗಿ ಗುರುತಿಸಿಕೊಂಡಿದೆ. ಈ ತನಕ ಈ ಇಬ್ಬರು ಆಟಗಾರರು 23 ಬಾರಿ ಫೈನಲ್‌ನಲ್ಲಿ ಆಡಿದ್ದು, ಜೊಕೊವಿಕ್ 13 ಬಾರಿ ಗೆಲುವು ಸಾಧಿಸಿದ್ದಾರೆ. ಜೊಕೊವಿಕ್-ನಡಾಲ್ ಎಲ್ಲ ನಾಲ್ಕೂ ಗ್ರಾನ್‌ಸ್ಲಾಮ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದಾರೆ. ಒಟ್ಟು 46 ಬಾರಿ ಮುಖಾಮುಖಿಯಾಗಿರುವ ನಡಾಲ್-ಜೊಕೊವಿಕ್ ತಲಾ 23 ಬಾರಿ ಗೆಲುವು ಸಾಧಿಸಿ ಸಮಬಲದ ಸಾಧನೆ ಮಾಡಿದ್ದಾರೆ.

ನಡಾಲ್ ಶನಿವಾರ ವೃತ್ತಿಜೀವನದ 99ನೆ ಫೈನಲ್ ಪಂದ್ಯವನ್ನು ಆಡಲಿದ್ದಾರೆ. ಜೊಕೊವಿಕ್ ಸತತ 16ನೆ ಬಾರಿ ಎಟಿಪಿ ಟೂರ್ನಿಯ ಫೈನಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News