ಇರ್ಫಾನ್ ಪಠಾಣ್ ಪರಾಕ್ರಮ, ಬರೋಡಾ ನಾಕೌಟ್‌ಗೆ
ವಡೋದರ, ಜ.9: ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ ಇರ್ಫಾನ್ ಪಠಾಣ್ ಬರೋಡ ತಂಡ ಕ್ವಾರ್ಟರ್ ಫೈನಲ್ ತಲುಪಲು ನೆರವಾದರು. ಚೇತೇಶ್ವರ ಪೂಜಾರ ಹಾಗೂ ಯುವರಾಜ್ ಸಿಂಗ್ ತಮ್ಮ ತಂಡಗಳನ್ನು ಮುಂದಿನ ಸುತ್ತಿಗೆ ತಲುಪಿಸಲು ವಿಫಲರಾದರು.
ಶನಿವಾರದ ಪಂದ್ಯದಲ್ಲಿ ಪಂಜಾಬ್ ತಂಡ ಕೇರಳದ ವಿರುದ್ಧ ಯುವರಾಜ್ (54 ರನ್) ನೆರವಿನಿಂದ 7ಕ್ಕೆ 135 ರನ್ ಗಳಿಸಿತು. ಸಂಜು ಸ್ಯಾಮ್ಸನ್(72ರನ್) ಸಾಹಸದಿಂದ ಕೇರಳ 5 ವಿಕೆಟ್‌ಗಳ ಜಯ ಸಾಧಿಸಿ ನಾಕೌಟ್ ಹಂತಕ್ಕೇರಿತು.
ಬರೋಡಾ ತಂಡ ಆಂಧ್ರ ವಿರುದ್ಧದ ಪಂದ್ಯದಲ್ಲಿ ಗೆಲುವಿಗೆ 92 ರನ್ ಗುರಿ ಪಡೆದಿತ್ತು. ಆದರೆ,52 ರನ್‌ಗೆ 6 ವಿಕೆಟ್ ಕಳೆದುಕೊಂಡಿತ್ತು. ಆಗ ತಂಡಕ್ಕೆ ಆಸರೆಯಾದ ಪಠಾಣ್(ಔಟಾಗದೆ 28) ಬರೋಡಾಕ್ಕೆ 3 ವಿಕೆಟ್‌ಗಳ ಗೆಲುವು ತಂದುಕೊಟ್ಟರು. ಐದೂ ಲೀಗ್ ಪಂದ್ಯಗಳನ್ನು ಜಯಿಸಿರುವ ಬರೋಡಾ ಅಜೇಯವಾಗಿ ಮುಂದಿನ ಸುತ್ತಿಗೇರಿತು.
ಚೇತೇಶ್ವರ ಪೂಜಾರ(54) ಏಕಾಂಗಿ ಹೋರಾಟದ ಹೊರತಾಗಿಯೂ ಸೌರಾಷ್ಟ್ರ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಜಾರ್ಖಂಡ್ ತಂಡ ಕ್ವಾರ್ಟರ್‌ಫೈನಲ್ ತಲುಪಿತು.