2ನೆ ಟ್ವೆಂಟಿ-20 ಪಂದ್ಯ: ಕಾಲಿನ್ 14 ಎಸೆತಗಳಲ್ಲಿ ಅರ್ಧಶತಕ; ನ್ಯೂಝಿಲೆಂಡ್‌ಗೆ ಸರಣಿ ಜಯ

Update: 2016-01-10 18:00 GMT

ಆಕ್ಲೆಂಡ್, ಜ.10: ಕಾಲಿನ್ ಮುನ್ರೊ 14 ಎಸೆತಗಳಲ್ಲಿ ದಾಖಲಿಸಿದ ಅರ್ಧ ಶತಕದ ನೆರವಿನಲ್ಲಿ ನ್ಯೂಝಿಲೆಂಡ್ ತಂಡ ಇಲ್ಲಿ ನಡೆದ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ 9 ವಿಕೆಟ್‌ಗಳ ಜಯ ಗಳಿಸಿದ್ದು, ಈ ಮೂಲಕ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಇಲ್ಲಿನ ಈಡನ್‌ಪಾರ್ಕ್‌ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 143 ರನ್‌ಗಳ ಸವಾಲನ್ನು ಪಡೆದ ನ್ಯೂಝಿಲೆಂಡ್ ತಂಡ ಇನ್ನೂ 60 ಎಸೆತಗಳು ಬಾಕಿ ಇರುವಂತೆಯೇ ಭರ್ಜರಿ ಗೆಲುವು ದಾಖಲಿಸಿತು.

ಮುನ್ರೊ ಗೆಲುವಿನ ಸಿಕ್ಸರ್ ಬಾರಿಸಿದರು. ಯುವರಾಜ್ ಸಿಂಗ್ 2007ರಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದರು. ಆದರೆ ಅವರ ದಾಖಲೆಯನ್ನು ಮುರಿಯಲು ಕಾಲಿನ್‌ಗೆ ಸಾಧ್ಯವಾಗಲಿಲ್ಲ.
ಕಾಲಿನ್ 16 ನಿಮಿಷಗಳ ಬ್ಯಾಟಿಂಗ್‌ನಲ್ಲಿ 14 ಎಸೆತಗಳನ್ನು ಎದುರಿಸಿದರು. 1 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಲ್ಲಿ ಅರ್ಧಶತಕ ಪೂರೈಸಿದರು.

ವ್ಯಾಂಡರ್ಸ್‌ಸೆ ಅವರ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು.
ಆರಂಭಿಕ ದಾಂಡಿಗರಾದ ಮಾರ್ಟಿನ್ ಗಪ್ಟಿಲ್ ಮತ್ತು ಕೇನ್ ವಿಲಿಯಮ್ಸನ್ ಮೊದಲ ವಿಕೆಟ್‌ಗೆ 6.4 ಓವರ್‌ಗಳಲ್ಲಿ 89 ರನ್‌ಗಳನ್ನು ಜಮೆ ಮಾಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು.
ಮಾರ್ಟಿನ್ ಗಪ್ಟಿಲ್ 29 ನಿಮಿಷಗಳ ಬ್ಯಾಟಿಂಗ್‌ನಲ್ಲಿ 25 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಲ್ಲಿ 63 ರನ್ ಗಳಿಸಿ ಔಟಾದರು. ಎರಡನೆ ವಿಕೆಟ್‌ಗೆ ನಾಯಕ ವಿಲಿಯಮ್ಸನ್‌ಗೆ ಕಾಲಿನ್ ಮುನ್ರೊ ಜೊತೆಯಾದರು.
 ಮುನ್ರೊ ಮತ್ತು ವಿಲಿಯಮ್ಸನ್ ಎರಡನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 58 ರನ್ ಗಳಿಸಿದರು.
ವಿಲಿಯಮ್ಸನ್ 45 ನಿಮಿಷಗಳ ಬ್ಯಾಟಿಂಗ್‌ನಲ್ಲಿ 21 ಎಸೆತಗಳನ್ನು ಎದುರಿಸಿದರು. 3 ಬೌಂಡರಿಗಳ ಸಹಾಯದಿಂದ ಔಟಾಗದೆ 32 ರನ್ ಗಳಿಸಿದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಶ್ರೀಲಂಕಾವನ್ನು ಬ್ಯಾಟಿಂಗ್‌ಗೆ ಇಳಿಸಿದ್ದರು.
 ನ್ಯಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಔಟಾಗದೆ 81 ರನ್ ಮತ್ತು ತಿಲಕರತ್ನೆ ದಿಲ್ಶನ್ 28 ರನ್ ಗಳಿಸಿರುವುದು ಬಿಟ್ಟರೆ ತಂಡದ ಸಹ ಆಟಗಾರರಿಗೆ ಎರಡಂಕೆಯ ಸ್ಕೋರ್ ದಾಖಲಿಸಲು ಸಾಧ್ಯವಾಗಲಿಲ್ಲ.
ಗ್ರಾಂಟ್ ಎಲಿಯೊಟ್ 22ಕ್ಕೆ 4 ವಿಕೆಟ್ ಮತ್ತು ಸ್ಯಾಂಟ್ನರ್ 24ಕ್ಕೆ 2 ವಿಕೆಟ್ ಎಗರಿಸಿ ಶ್ರೀಲಂಕಾವನ್ನು 142 ರನ್‌ಗಳಿಗೆ ನಿಯಂತ್ರಿಸಿದರು. ಲಂಕಾದ ಮಾಥ್ಯೂಸ್ 60 ನಿಮಿಷಗಳ ಬ್ಯಾಟಿಂಗ್‌ನಲ್ಲಿ 49 ಎಸೆತಗಳನ್ನು ಎದುರಿಸಿ 7 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 81 ರನ್ ಗಳಿಸಿದರು.
  ನ್ಯೂಝಿಲೆಂಡ್ ಈ ಗೆಲುವಿನೊಂದಿಗೆ ಮೂರು ವಿಧದ ಕ್ರಿಕೆಟ್‌ನಲ್ಲಿ ಸರಣಿ ಜಯಿಸಿದೆ. ಕಿವೀಸ್ ಟೆಸ್ಟ್‌ನಲ್ಲಿ 2-0, ಏಕದಿನ ಕ್ರಿಕೆಟ್‌ನಲ್ಲಿ 3-1ಮತ್ತು ಟ್ವೆಂಟಿ-20 ಪಂದ್ಯದಲ್ಲಿ 2-0 ಅಂತರದಲ್ಲಿ ಜಯ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 142
( ಮ್ಯಾಥ್ಯೂಸ್ 81, ದಿಲ್ಶನ್28; ಎಲಿಯೊಟ್ 4-22, ಮಿಲ್ನೆ 2-36).
ನ್ಯೂಝಿಲೆಂಡ್ 10 ಓವರ್‌ಗಳಲ್ಲಿ 147/1
( ಗಪ್ಟಿಲ್ 63, ಮುನ್ರೊ ಔಟಾಗದೆ 50, ವಿಲಿಯಮ್ಸನ್ ಔಟಾಗದೆ 32 ; ಪೆರೆರಾ 1-26).
ಪಂದ್ಯಶ್ರೇಷ್ಠ: ಕಾಲಿನ್ ಮುನ್ರೊ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News