ಕಾಂಗರೂ ಬೇಟೆಗೆ ಸಜ್ಜಾಗಿರುವ ಬ್ಲೂಬಾಯ್ಸ್‌ ; ಭಾರತ-ಆಸ್ಟ್ರೇಲಿಯ ಮೊದಲ ಏಕದಿನ ಪಂದ್ಯ

Update: 2016-01-11 17:58 GMT


 ಪರ್ತ್, ಜ.11: ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವೆ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮಂಗಳವಾರ ನಡೆಯಲಿದೆ.
 ಕಳೆದ ಬಾರಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಭಾರತ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಎದುರಿಸಿತ್ತು. ನಾಯಕ ಸ್ಟೀವನ್ ಸ್ಮಿತ್ ದಾಖಲಿಸಿದ 105 ರನ್‌ಗಳ ನೆರವಿನಿಂದ ಆಸ್ಟ್ರೇಲಿಯ ತಂಡ ಭಾರತಕ್ಕೆ ಮತ್ತೊಮ್ಮೆ ವಿಶ್ವಕಪ್ ಎತ್ತುವ ಕನಸನ್ನು ಭಗ್ನಗೊಳಿಸಿತ್ತು.
ಭಾರತದ ವಿರುದ್ಧ ಭರ್ಜರಿ ಜಯ ದಾಖಲಿಸಿದ ಆಸ್ಟ್ರೇಲಿಯ ಬಳಿಕ ನ್ಯೂಝಿಲೆಂಡ್ ವಿರುದ್ಧ ಫೈನಲ್‌ನಲ್ಲಿ ಗೆಲುವಿನೊಂದಿಗೆ ಐದನೆ ಬಾರಿ ವಿಶ್ವ ಚಾಂಪಿಯನ್ ಎನಿಸಿಕೊಂಡಿತ್ತು.
ವಿಶ್ವಕಪ್ ಮುಗಿದು 10 ತಿಂಗಳುಗಳು ಕಳೆಯಿತು. ಆಸ್ಟ್ರೇಲಿಯ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮೈಕಲ್ ಕ್ಲಾರ್ಕ್, ಮಿಚೆಲ್ ಜಾನ್ಸನ್ ಮತ್ತು ಬ್ರಾಡ್ ಹಡಿನ್ ನಿವೃತ್ತರಾಗಿದ್ದಾರೆ. ಮಿಚೆಲ್ ಸ್ಟಾರ್ಕ್ ಗಾಯಗೊಂಡಿದ್ಧಾರೆ. ಶೇನ್ ವ್ಯಾಟ್ಸನ್‌ರನ್ನು ಕೈ ಬಿಡಲಾಗಿದೆ. ಸ್ಮಿತ್ ತಂಡದ ಹೊಸ ನಾಯಕ. ವಿಶ್ವಕಪ್ ಬಳಿಕ ಆಸ್ಟ್ರೇಲಿಯ ತಂಡ ಇಂಗ್ಲೆಂಡ್ ವಿರುದ್ಧ ಒಂದು ಸರಣಿ ಜಯಿಸಿದೆ.
  2015ರಲ್ಲಿ ಭಾರತದ ಪ್ರದರ್ಶನ ತೃಪ್ತಿಕರವಾಗಿಲ್ಲ. ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲೇ ಅಭಿಯಾನ ಕೊನೆಗೊಳಿಸಿದ ಬಳಿಕ ಬಾಂಗ್ಲಾ ವಿರುದ್ಧ ಭಾರತ 1-2 ಅಂತರದಲ್ಲಿ ಸೋಲು ಅನುಭವಿಸಿತು. ಆಫ್ರಿಕ ವಿರುದ್ಧದ ತವರಲ್ಲಿ ನಡೆದ ಸರಣಿಯಲ್ಲೂ ಸೋಲು ಅನುಭವಿಸಿತು. ವಿಶ್ವಕಪ್ ಬಳಿಕ ಭಾರತ ಒಂದು ಸರಣಿಯನ್ನು ಗೆದ್ದುಕೊಂಡಿದೆ. ಅದು ದುರ್ಬಲ ಝಿಂಬಾಬ್ವೆ ವಿರುದ್ಧ. ಆದರೆ ಆಸ್ಟ್ರೇಲಿಯಕ್ಕಿಂತ ಭಾರತ ತಂಡದಲ್ಲಿ ಕಡಿಮೆ ಬದಲಾವಣೆಯಾಗಿದೆ.
ಗಾಯದ ಕಾರಣದಿಂದಾಗಿ ವೇಗಿಗಳಾದ ಮುಹಮ್ಮದ್ ಶಮಿ ಮತ್ತು ಮೋಹಿತ್ ಶರ್ಮ ಸೇವೆಯಿಂದ ಟೀಮ್ ಇಂಡಿಯಾ ವಂಚಿತಗೊಂಡಿದೆ. ಆಫ್ರಿಕ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸುರೇಶ್ ರೈನಾರನ್ನು ತಂಡದಿಂದ ಕೈ ಬಿಡಲಾಗಿದೆ. ಇವರ ಬದಲಿಗೆ ಮೂವರು ಹೊಸ ಆಟಗಾರರು ಚೊಚ್ಚಲ ಪಂದ್ಯ ಆಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಅವರೆಂದರೆ ಬರಿಂದರ್ ಸರಣ್, ಗುರುಕೀರತ್ ಸಿಂಗ್ ಮತ್ತು ರಿಶಿ ಧವನ್. ಆಸ್ಟ್ರೇಲಿಯ ತಂಡದಲ್ಲೂ ಜೋಲ್ ಪ್ಯಾರಿಸ್ ಮತ್ತು ಸ್ಕಾಟ್ ಬೊಲಾಂಡ್ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಲಿದ್ದಾರೆ.
ತಂಡದ ಸಮಾಚಾರ: ಆಸ್ಟ್ರೇಲಿಯ ಮೊದಲ ಏಕದಿನ ಪಂದ್ಯಕ್ಕೆ ಅಂತಿಮ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ವೇಗದ ಬೌಲರ್‌ಗಳಾದ ಪ್ಯಾರಿಸ್ ಮತ್ತು ಬೊಲೆಂಡ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವೇಗದ ಬೌಲರ್ ಕೇನ್ ರಿಚರ್ಡ್ಸನ್ ತಂಡದ ಸೇವೆಗೆ ಲಭ್ಯರಿಲ್ಲ. ಬ್ಯಾಟ್ಸ್‌ಮನ್ ಶಾನ್ ಮಾರ್ಷ್‌ಗೆ ಅವಕಾಶ ಇಲ್ಲ.
 ಟೀಮ್ ಇಂಡಿಯಾ ಆಸ್ಟ್ರೇಲಿಯಕ್ಕೆ ಐವರು ತಜ್ಞ ಬ್ಯಾಟ್ಸ್‌ಮನ್‌ಗಳೊಂದಿಗೆ ಆಗಮಿಸಿತ್ತು. ಈ ಕಾರಣದಿಂದಾಗಿ ನಂ.6ನೆ ಕ್ರಮಾಂಕದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಗುರುಕೀರತ್ ಸಿಂಗ್ ಮತ್ತು ಮನೀಷ್ ಪಾಂಡೆ ಇವರ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.ಪಾಂಡೆ ಪ್ರದರ್ಶನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿರುವ ಹಿನ್ನೆಲೆಯಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಗಾಯಾಳು ಶಮಿ ಬದಲಿಗೆ ಬರಿಂದರ್ ಸರಣ್ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ.
ಭಾರತ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲು ಯೋಚಿಸುತ್ತಿದೆ. ಸ್ಪಿನ್ನರಗಳಾದ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜ, ವೇಗಿಗಳಾದ ಉಮೇಶ್ ಯಾದವ್‌ಗೆ ಸರಣ್ ದಾಳಿಗೆ ಸಾಥ್ ನೀಡಲಿದ್ದಾರೆ. ಆಲ್‌ರೌಂಡರ್ ರಿಶಿ ಧವನ್ ಚೊಚ್ಚಲ ಪಂದ್ಯದಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ. ಇಶಾಂತ್ ಶರ್ಮ ಅವಕಾಶಕ್ಕಾಗಿ ಎದುರು ನೋಡುತ್ತಿದ್ಧಾರೆ.
 ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಗುರುಕೀರತ್ ಸಿಂಗ್/ಮನೀಷ್ ಪಾಂಡೆ, ರವೀಂದ್ರ ಜಡೇಜ, ಆರ್.ಅಶ್ವಿನ್, ಉಮೇಶ್ ಯಾದವ್, ಬರೀಂದರ್ ಸರಣ್, ಇಶಾಂತ್ ಶರ್ಮ/ಅಕ್ಷರ್ ಪಟೇಲ್/ರಿಶಿ ಧವನ್.
ಆಸ್ಟ್ರೇಲಿಯ: ಸ್ಟೀವನ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಆ್ಯರೊನ್ ಫಿಂಚ್, ಜಾರ್ಜ್ ಬೈಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಜೇಮ್ಸ್ ಫಾಕ್ನರ್, ಸ್ಕಾಟ್ ಬೊಲೆಂಡ್, ಜೋಶ್ ಹೇಝಲ್‌ವುಡ್, ಜೋಲ್ ಪ್ಯಾರಿಸ್.
   ಪಿಚ್ ಪರಿಸ್ಥಿತಿ, ವಾತಾವರಣ: ವಾಕಾ ಕ್ರೀಡಾಂಗಣದ ಪಿಚ್ ವೇಗಿಗಳ ಸ್ನೇಹಿ ಆಗಿದೆ. ವಾತಾವರಣ ಬಿಸಿಯಾಗಿದ್ದು, ಪಂದ್ಯದ ವೇಳೆ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆ ಇದೆ.
ಅಂಕಿ-ಅಂಶ
*2008ರ ಬಳಿಕ ಭಾರತ ಆಸ್ಟ್ರೇಲಿಯದಲ್ಲಿ ಆಡಿರುವ 6 ಏಕದಿನ ಸರಣಿಗಳ ಪೈಕಿ ಕೇವಲ ಒಂದರಲ್ಲಿ ಜಯ ಗಳಿಸಿದೆ.
 *ಭಾರತ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ನಂ.2 ಸ್ಥಾನ ಉಳಿಸಿಕೊಳ್ಳಬೇಕಾದರೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಕನಿಷ್ಠ ಒಂದು ಪಂದ್ಯದಲ್ಲಿ ಜಯ ಗಳಿಸಬೇಕಾಗಿದೆ.
*ಭಾರತದ ಮೂವರು ಆಟಗಾರರು ರ್ಯಾಂಕಿಂಗ್‌ನಲ್ಲಿ ಅಗ್ರ 10ರೊಳಗೆ ಅವಕಾಶ ಪಡೆದಿದ್ದಾರೆ. ಅವರೆಂದರೆ ವಿರಾಟ್ ಕೊಹ್ಲಿ, ಧೋನಿ, ಶಿಖರ್ ಧವನ್. ಆಸ್ಟ್ರೇಲಿಯದ ಗ್ಲೆನ್ ಮ್ಯಾಕ್ಸ್‌ವೆಲ್ ಮಾತ್ರ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.
ಪಂದ್ಯದ ಸಮಯ: ಬೆಳಗ್ಗೆ 8:50ಕ್ಕೆ ಆರಂಭ.
,,,,,,,,,
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News