ಐಪಿಎಲ್‌ನ ಪುಣೆ ಫ್ರಾಂಚೈಸಿಗೆ ಫ್ಲೆಮಿಂಗ್ ಕೋಚ್
ಕೋಲ್ಕತಾ, ಜ.11: ಐಪಿಎಲ್ ಟ್ವೆಂಟಿ-20 ಟೂರ್ನಮೆಂಟ್‌ನ ಹೊಸ ಪುಣೆ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ನ್ಯೂಝಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಸೋಮವಾರ ಆಯ್ಕೆಯಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ಕೋಚ್ ಆಗಿ ಯಶಸ್ವಿಯಾಗಿರುವ ಫ್ಲೆಮಿಂಗ್ ಇದೀಗ ಚೆನ್ನೈನ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದ ಪುಣೆ ತಂಡಕ್ಕೆ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಧೋನಿ-ಫ್ಲೆಮಿಂಗ್ ಜೋಡಿ ಪುಣೆ ತಂಡಕ್ಕೆ ಯಶಸ್ಸು ತಂದುಕೊಡಬಲ್ಲರೇ ಎಂದು ಕಾದು ನೋಡಬೇಕಾಗಿದೆ.
ಧೋನಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಡಾಫ್ಟ್ ಪ್ರಕ್ರಿಯೆಯ ವೇಳೆ ಎರಡು ವರ್ಷಗಳ ಕಾಲ ನಿಷೇಧ ಎದುರಿಸುತ್ತಿರುವ ಚೆನ್ನೈ ತಂಡದಿಂದ ಪುಣೆ ತಂಡಕ್ಕೆ 12.5 ಕೋಟಿ ರೂ.ಗೆ ಹರಾಜಾಗಿದ್ದರು.
ಧೋನಿ ಹಾಗೂ ಫ್ಲೆಮಿಂಗ್ ಸಿಎಸ್‌ಕೆ ತಂಡ ಸತತ ಎರಡು ಬಾರಿ ಐಪಿಎಲ್ ಚಾಂಪಿಯನ್ ಹಾಗೂ ಮತ್ತೆರಡು ಬಾರಿ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟ್ರೋಫಿಗಳನ್ನು ಗೆದ್ದುಕೊಳ್ಳಲು ಕಾರಣರಾಗಿದ್ದರು. ಈ ಇಬ್ಬರ ಪರಿಶ್ರಮದಿಂದ ಚೆನ್ನೈ ತಂಡ ಐಪಿಎಲ್‌ನ ಯಶಸ್ವಿ ತಂಡವಾಗಿ ಹೊರಹೊಮ್ಮಿತ್ತು.