ಟ್ವೆಂಟಿ-20 ಕ್ರಿಕೆಟ್: ಅಫ್ಘಾನಿಸ್ತಾನದ ಮಡಿಲಿಗೆ ಸರಣಿ
ನಾಲ್ಕನೆ ಗರಿಷ್ಠ ಸ್ಕೋರ್ ದಾಖಲಿಸಿದ ಶೆಹಝಾದ್
ಶಾರ್ಜಾ, ಜ.11: ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ನಾಲ್ಕನೆ ಗರಿಷ್ಠ ಸ್ಕೋರ್ ದಾಖಲಿಸಿದ ವಿಕೆಟ್‌ಕೀಪರ್-ದಾಂಡಿಗ ಮುಹಮ್ಮದ್ ಶೆಹಝಾದ್( ಔಟಾಗದೆ 118 ರನ್) ಸಾಹಸದಿಂದ ಅಫ್ಘಾನಿಸ್ತಾನ ತಂಡ ಝಿಂಬಾಬ್ವೆ ವಿರುದ್ಧ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದೆ.
ಇಲ್ಲಿನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಝಿಂಬಾಬ್ವೆ ತಂಡವನ್ನು 81 ರನ್‌ಗಳ ಅಂತರದಿಂದ ಮಣಿಸಿದ ಅಫ್ಘಾನಿಸ್ತಾನ ಎರಡು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು. ಅಫ್ಘಾನ್ ಶುಕ್ರವಾರ ಮೊದಲ ಪಂದ್ಯವನ್ನು ಕೇವಲ 5 ರನ್‌ನಿಂದ ಗೆದ್ದುಕೊಂಡಿತ್ತು.
ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡ ಶೆಹಝಾದ್ ಶತಕದ (118 ರನ್, 67 ಎಸೆತ, 10 ಬೌಂಡರಿ, 8 ಸಿಕ್ಸರ್) ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 215 ರನ್ ಗಳಿಸಿತು.
ಗೆಲ್ಲಲು 216 ರನ್ ಗುರಿ ಪಡೆದ ಝಿಂಬಾಬ್ವೆ 5.3 ಓವರ್‌ಗಳಲ್ಲಿ 34 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭದಲ್ಲೇ ಕುಸಿತ ಕಂಡಿತು. ಹ್ಯಾಮಿಲ್ಟನ್ ಮಸಕಝ(63 ರನ್, 44 ಎಸೆತ, 5 ಸಿಕ್ಸರ್, 2 ಬೌಂಡರಿ) ಹಾಗೂ ಪೀಟರ್ ಮೂರ್(35) ಆರನೆ ವಿಕೆಟ್‌ಗೆ 77 ರನ್ ಜೊತೆಯಾಟ ನಡೆಸಿದರೂ ಝಿಂಬಾಬ್ವೆ ತಂಡ 18.1 ಓವರ್‌ಗಳಲ್ಲಿ 134 ರನ್‌ಗೆ ಆಲೌಟಾಯಿತು.
ಅಫ್ಘಾನ್‌ನ ಪರ ದೌಲತ್ ಝದ್ರಾನ್(2-21), ಆಮಿರ್ ಹಂಝ(2-15) ಹಾಗೂ ಸೈಯದ್ ಶಿರ್ಝಾದ್(2-31) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಶೆಹಝಾದ್ ಶೈನ್
ಅಫ್ಘಾನಿಸ್ತಾನದ ಮುಹಮ್ಮದ್ ಶೆಹಝಾದ್ ಟ್ವೆಂಟಿ-20 ಟೂರ್ನಿಯ ಇತಿಹಾಸದಲ್ಲಿ ನಾಲ್ಕನೆ ಗರಿಷ್ಠ ಸ್ಕೋರನ್ನು ದಾಖಲಿಸಿ ಗಮನ ಸೆಳೆದರು. ಕೇವಲ ಒಂದು ರನ್‌ನಿಂದ ದಕ್ಷಿಣ ಆಫ್ರಿಕದ ಎಫ್‌ಡು ಪ್ಲೆಸಿಸ್ ದಾಖಲೆ ಮುರಿಯುವುದರಿಂದ ವಂಚಿತರಾದರು.
ಕಳೆದ ವರ್ಷ ಜನವರಿಯಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಪ್ಲ್ಲೆಸಿಸ್ ವೆಸ್ಟ್‌ಇಂಡೀಸ್‌ನ ವಿರುದ್ಧ 56 ಎಸೆತಗಳಲ್ಲಿ 119 ರನ್ ಗಳಿಸಿದ್ದರು. ಆಸ್ಟ್ರೇಲಿಯದ ಆ್ಯರೊನ್ ಫಿಂಚ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್(156 ರನ್) ದಾಖಲಿಸಿದ್ದಾರೆ. ಫಿಂಚ್ 2013ರಲ್ಲಿ ಸೌಥಾಂಪ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು.
ನ್ಯೂಝಿಲೆಂಡ್‌ನ ಬ್ರೆಂಡನ್ ಮೆಕಲಮ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಎರಡನೆ ಗರಿಷ್ಠ ಸ್ಕೋರ್(123 ರನ್) ದಾಖಲಿಸಿದ್ದಾರೆ. 2012ರಲ್ಲಿ ಪಲ್ಲೆಕಲೆಯಲ್ಲಿ ಬಾಂಗ್ಲಾದೇಶದ ವಿರುದ್ಧ ಮೆಕಲಮ್ ಈ ಸಾಧನೆ ಮಾಡಿದ್ದರು.
‘‘ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನನ್ನ ಫೇವರಿಟ್ ಮೈದಾನ. ಇಲ್ಲಿ ತನಗೆ ಬ್ಯಾಟಿಂಗ್ ಮಾಡುವುದೆಂದರೆ ತುಂಬಾ ಇಷ್ಟ. ತಾನು ಯಾವುದೇ ಯೋಜನೆ ಹಾಕಿಕೊಂಡಿರಲಿಲ್ಲ. ಪ್ರತಿ ಚೆಂಡನ್ನು ಬೌಂಡರಿಯ ಹೊರಗೆ ಅಟ್ಟಲು ಬಯಸಿದ್ದೆ’’ ಎಂದು ಶೆಹಝಾದ್ ಇಎಸ್‌ಪಿಎನ್ ಡಾಟ್‌ಕಾಮ್‌ಗೆ ಪ್ರತಿಕ್ರಿಯಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಅಫ್ಘಾನಿಸ್ತಾನ: 20 ಓವರ್‌ಗಳಲ್ಲಿ 215/6
(ಮುಹಮ್ಮದ್ ಶೆಹಝಾದ್ 118, ಮುಹಮ್ಮದ್ ನಬಿ 22, ಚಿಸೊರೊ 1-25, ತಿರಿಪಾನೊ 1-36, ಜಾಂಗ್ವೆ 1-34)
ಝಿಂಬಾಬ್ವೆ: 18.1 ಓವರ್‌ಗಳಲ್ಲಿ 134 ರನ್‌ಗೆ ಆಲೌಟ್
(ದೌಲತ್ ಝದ್ರಾನ್ 2-21, ಆಮಿರ್ ಹಂಝ 2-15, ಸೈಯದ್ ಶಿರ್ಝಾದ್ 2-31)
ಪಂದ್ಯಶ್ರೇಷ್ಠ: ಮುಹಮ್ಮದ್ ಶೆಹಝಾದ್
ಸರಣಿಶ್ರೇಷ್ಠ: ಮುಹಮ್ಮದ್ ಶೆಹಝಾದ್
ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ಟಾಪ್-5 ದಾಂಡಿಗರು
ಆಟಗಾರ ರನ್ ತಂಡ ಎದುರಾಳಿ ವರ್ಷ
ಆ್ಯರನ್ ಫಿಂಚ್ 156 ಆಸ್ಟ್ರೇಲಿಯ ಇಂಗ್ಲೆಂಡ್ 2013
ಬ್ರೆಂಡನ್ ಮೆಕಲಮ್ 123 ಕಿವೀಸ್ ಬಾಂಗ್ಲಾ 2012
ಎಫ್‌ಡು ಪ್ಲೆಸಿಸ್ 119 ದ.ಆಫ್ರಿಕ ವಿಂಡೀಸ್ 2015
ಎಂ.ಶೆಹಝಾದ್ 118 ಅಫ್ಘಾನ್ ಝಿಂಬಾಬ್ವೆ 2016
ರಿಚರ್ಡ್ ಲೆವಿ 117 ದ.ಆಫ್ರಿಕ ಕಿವೀಸ್ 2012