ವಾಕಾದಲ್ಲಿ ಕಾಂಗರೂಗಳ ಗೆಲುವಿನ ಕೇಕೆ
ಮೊದಲ ಏಕದಿನ ಪಂದ್ಯ: ಭಾರತದ ಗೆಲುವಿನ ಪ್ರಯತ್ನಕ್ಕೆ ತಡೆಯಾದ ಬೈಲಿ-ಸ್ಮಿತ್ * ರೋಹಿತ್ ಶತಕ ವ್ಯರ್ಥ *ಆಸ್ಟ್ರೇಲಿಯಕ್ಕೆ ಐದು ವಿಕೆಟ್‌ಗಳ ಜಯ
ಪರ್ತ್, ಜ.12: ವಾಕಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯದ ದಾಂಡಿಗರು ರನ್ ಹೊಳೆ ಹರಿಸಿದ್ದರು. ಭಾರತದ ವಿರುದ್ಧ ಗೆಲುವಿಗೆ ಕಠಿಣ ಸವಾಲನ್ನು ಪಡೆದಿದ್ದರೂ ಆಸ್ಟ್ರೇಲಿಯ ತಂಡಕ್ಕೆ ಗೆಲುವಿನ ದಡ ಸೇರಲು ಕಷ್ಟವಾಗಲಿಲ್ಲ.
ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಎರಡನೆ ವಿಕೆಟ್‌ಗೆ 207 ರನ್‌ಗಳ ಜೊತೆಯಾಟ ನೀಡಿ ಭಾರತಕ್ಕೆ ಅಸ್ಟ್ರೇಲಿಯ ವಿರುದ್ಧ ಕಠಿಣ ಸವಾಲನ್ನು ವಿಧಿಸಲು ನೆರವಾಗಿದ್ದರು.
ಗೆಲುವಿಗೆ 310 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ ತಂಡಕ್ಕೆ ನಾಯಕ ಸ್ಟೀವ್ ಸ್ಮಿತ್ ಮತ್ತು ಜಾರ್ಜ್ ಬೈಲಿ ಮೂರನೆ ವಿಕೆಟ್‌ಗೆ 242 ರನ್‌ಗಳ ಕೊಡುಗೆ ನೀಡಿ ಭಾರತಕ್ಕೆ ಸರಣಿಯಲ್ಲಿ ಮೊದಲ ಗೆಲುವು ನಿರಾಕರಿಸಿದರು.
ಚೊಚ್ಚಲ ಏಕದಿನ ಪಂದ್ಯವನ್ನಾಡುತ್ತಿರುವ ಬರೀಂದರ್ ಸ್ರಾನ್ ಮೊದಲ ಮೂರು ಓವರ್‌ಗಳಲ್ಲಿ ವಾರ್ನರ್ ಹಾಗೂ ಫಿಂಚ್‌ಗೆ ಪಂಚ್ ನೀಡಿ ಪೆವಿಲಿಯನ್‌ಗೆ ಅಟ್ಟಿದ್ದರು. ಮೂರನೆ ವಿಕೆಟ್‌ಗೆ ನಾಯಕ ಸ್ಮಿತ್ ಮತ್ತು ಬೈಲಿ 242 ರನ್ ಸೇರಿಸಿದರು. 41.5 ಓವರ್‌ಗಳಲ್ಲಿ ತಂಡದ ಸ್ಕೋರ್‌ನ್ನು 263ಕ್ಕೆ ಏರಿಸಿದರು.
ಸ್ಮಿತ್ ಐದನೆ ಶತಕ ದಾಖಲಿಸಿದರು. ಬೈಲಿ ಮೂರನೆ ಏಕದಿನ ಶತಕ ಗಳಿಸಿದರು. ಬೈಲಿ 112 ರನ್ ಗಳಿಸಿ ಔಟದರು. ಸ್ಮಿತ್ ಗೆಲುವಿಗೆ ಇನ್ನು ಎರಡು ರನ್‌ಗಳ ಆವಶ್ಯಕತೆ ಇದ್ದಾಗ ಬರೀಂದರ್‌ಗೆ ವಿಕೆಟ್ ಒಪ್ಪಿಸಿದರು.ಈ ಕಾರಣದಿಂದಾಗಿ ಸ್ಮಿತ್‌ಗೆ ಗೆಲುವಿನ ರನ್ ಗಳಿಸಲು ಸಾಧ್ಯವಾಗಲಿಲ್ಲ. ಜೇಮ್ಸ್ ಫಾಕ್ನರ್ ಗೆಲುವಿನ ರನ್ ಬಾರಿಸಿದರು.
ಆರಂಭಿಕ ದಾಂಡಿಗರಾದ ಆ್ಯರೊನ್ ಫಿಂಚ್(8) ಮತ್ತು ಡೇವಿಡ್ ವಾರ್ನರ್ (5)ಬೇಗನೆ ಔಟಾದರು. ಇವರನ್ನು ಪೆವಿಲಿಯನ್‌ಗೆ ಅಟ್ಟಿದ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಬರೀಂದರ್ ಸ್ರಾನ್ ಐದನೆ ಓವರ್‌ನ 5ನೆ ಎಸೆತದಲ್ಲಿ ಜಾರ್ಜ್‌ಗೆ ಪೆವಿಲಿಯನ್ ಹಾದಿ ತೋರಿಸುವ ಯತ್ನ ನಡೆಸಿದರು. ಅವರ ಚೆಂಡನ್ನು ಬೈಲಿ ಬ್ಯಾಟ್ ಸ್ಪರ್ಶಿಸಿ ವಿಕೆಟ್ ಕೀಪರ್ ಧೋನಿ ಕೈ ಸೇರಿದ್ದರೂ, ಅಂಪೈರ್ ಔಟ್ ನೀಡಲಿಲ್ಲ. ಜೀವದಾನ ಪಡೆದ ಬೈಲಿ ಶತಕ ದಾಖಲಿಸಿ ಔಟಾದರು. ಸ್ಮಿತ್ ಜೊತೆ ಸೊಗಸಾದ ಇನಿಂಗ್ಸ್ ಕಟ್ಟಿದರು.
ಬೈಲಿ 137 ನಿಮಿಷಗಳ ಬ್ಯಾಟಿಂಗ್‌ನಲ್ಲಿ 120 ಎಸೆತಗಳನ್ನು ಎದುರಿಸಿದರು. 7 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 112 ರನ್ ಗಳಿಸಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು.
ಸ್ಮಿತ್ 179 ನಿಮಿಷಗಳ ಬ್ಯಾಟಿಂಗ್‌ನಲ್ಲಿ 135 ಎಸೆತಗಳನ್ನು ಎದುರಿಸಿದರು. 11 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 149 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗ್ಲೆನ್ ಮ್ಯಾಕ್ಸ್‌ವೆಲ್ 6 ರನ್ ಗಳಿಸಿ ಔಟಾದರು. ಮಿಚೆಲ್ ಮಾರ್ಷ್ ಔಟಾಗದೆ 12 ರನ್ ಸೇರಿಸಿದರು.
ಬರೀಂದರ್ ಸ್ರಾನ್ 56ಕ್ಕೆ 3 ವಿಕೆಟ್ ಮತ್ತು ಅಶ್ವಿನ್ 68ಕ್ಕೆ 2 ವಿಕೆಟ್ ಗಿಟ್ಟಿಸಿಕೊಂಡರು. ಭಾರತದ ಪರ 7 ಮಂದಿ ಬೌಲರ್‌ಗಳನ್ನು ಧೋನಿ ದಾಳಿಗಿಳಿಸಿದ್ದರು. ಈ ಪೈಕಿ ಸ್ರಾನ್ ಮತ್ತು ಭುವನೇಶ್ವರ ಕುಮಾರ್ ಆಸ್ಟ್ರೇಲಿಯದ ದಾಂಡಿಗರಿಗೆ ಹೆಚ್ಚು ರನ್ ಬಿಟ್ಟುಕೊಡಲಿಲ್ಲ. ರೋಹಿತ್ ಶರ್ಮ ಒಂದೇ ಓವರ್‌ನಲ್ಲಿ 11 ರನ್ ನೀಡಿದ್ದರು.
ಉಮೇಶ್ ಯಾದವ್, ರವೀಂದ್ರ ಜಡೇಜ, ವಿರಾಟ್ ಕೊಹ್ಲಿ ವಿಕೆಟ್ ಪಡೆಯದೆ ಕೈ ಸುಟ್ಟುಕೊಂಡರು.
ಭಾರತ 309: ಟಾಸ್ ಜಯಿಸಿದ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆರಂಭದಲ್ಲಿ ತಂಡದ ಬ್ಯಾಟಿಂಗ್ ನಿಧಾನವಾಗಿತ್ತು. ತಂಡದ ಸ್ಕೋರ್ 6.4 ಓವರ್‌ಗಳಲ್ಲಿ 36ಕ್ಕೆ ತಲುಪುವಾಗ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು.
ಆರಂಭಿಕ ದಾಂಡಿಗ ಶಿಖರ್ ಧವನ್ 27 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದರು. 22 ಎಸೆತಗಳನ್ನು ಎದುರಿಸಿ 1 ಬೌಂಡರಿಯ ಸಹಾಯದಿಂದ 9 ರನ್ ಗಳಿಸಿ ನಿರ್ಗಮಿಸಿದರು. ಎರಡನೆ ವಿಕೆಟ್‌ಗೆ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು.ಎರಡನೆ ವಿಕೆಟ್‌ಗೆ 207 ರನ್‌ಗಳ ಜೊತೆಯಾಟ ನೀಡಿದರು. 28ರ ಹರೆಯದ ರೋಹಿತ್ ಶರ್ಮ 144ನೆ ಏಕದಿನ ಪಂದ್ಯದಲ್ಲಿ 9ನೆ ಶತಕ ದಾಖಲಿಸಿದರು. ನಾಲ್ಕನೆ ಬಾರಿ 150ಕ್ಕೂ ಅಧಿಕ ರನ್ ದಾಖಲಿಸಿದರು. ಶರ್ಮ ದ್ವಿಶತಕ ದಾಖಲಿಸುವ ಯೋಜನೆಯಲ್ಲಿದ್ದರು. ಆದರೆ ಅವರು ಇನಿಂಗ್ಸ್ ಪೂರ್ತಿ ಕ್ರೀಸ್‌ಗೆ ಅಂಟಿಕೊಂಡು ಬ್ಯಾಟ್ ಮಾಡಿದರೂ, ದ್ವಿಶತಕ ಸಾಧ್ಯವಾಗಲಿಲ್ಲ. ಔಟಾಗದೆ 171 ರನ್(205 ನಿ, 163ಎ, 13ಬೌ,7ಸಿ) ಗಳಿಸಿದರು. ನಾಯಕ ವಿರಾಟ್ ಕೊಹ್ಲಿ 91 ರನ್(148ನಿ, 97ಎ, 9ಬೌ,1ಸಿ) ಗಳಿಸಿ ಶತಕ ವಂಚಿತಗೊಂಡರು.
ನಾಯಕ ಮಹೇಂದ್ರ ಸಿಂಗ್ ಧೋನಿ 18 ರನ್ ಗಳಿಸಿ ಔಟಾದರು. ರವೀಂದ್ರ ಜಡೇಜ 10 ರನ್ ಗಳಿಸಿ ಔಟಾಗದೆ ಉಳಿದರು.
ಸ್ಕೋರ್ ಪಟ್ಟಿ
ಭಾರತ ಮೊದಲ ಇನಿಂಗ್ಸ್ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 309
ರೋಹಿತ್ ಶರ್ಮ ಔಟಾಗದೆ 171
ಶಿಖರ್ ಧವನ್ ಸಿ ಮಾರ್ಷ್ ಬಿ ಹೇಝಲ್‌ವುಡ್ 9
ವಿರಾಟ್ ಕೊಹ್ಲಿ ಸಿ ಬೊಲೆಂಡ್ ಬಿ ಫಾಕ್ನರ್ 91
ಎಂಎಸ್ ಧೋನಿ ಸಿ ಬೊಲೆಂಡ್ ಬಿ ಫಾಕ್ನರ್ 18
ರವೀಂದ್ರ ಜಡೇಜ ಔಟಾಗದೆ 10
ಇತರ 10
ವಿಕೆಟ್ ಪತನ: 1-36, 2-243, 3-286
ಬೌಲಿಂಗ್ ವಿವರ
ಹೇಝಲ್‌ವುಡ್ 10-0-41-1
ಜೆಎಸ್ ಪ್ಯಾರಿಸ್ 08-0-53-0
ಮಿಚೆಲ್ ಮಾರ್ಷ್ 09-0-53-0
ಎಸ್‌ಎಂ ಬೊಲೆಂಡ್ 10-0-74-0
ಜೇಮ್ಸ್ ಫಾಕ್ನರ್ 10-0-60-2
ಗ್ಲೆನ್ ಮ್ಯಾಕ್ಸ್‌ವೆಲ್ 03-0-22-0
ಆಸ್ಟ್ರೇಲಿಯ 49.2 ಓವರ್‌ಗಳಲ್ಲಿ 310/5
ಎಜೆ ಫಿಂಚ್ ಸಿ ಮತ್ತು ಬಿ ಸ್ರಾನ್ 08
ಡೇವಿಡ್ ವಾರ್ನರ್ ಸಿ ಕೊಹ್ಲಿ ಬಿ ಸ್ರಾನ್ 05
ಸ್ಟೀವ್ ಸ್ಮಿತ್ ಸಿ ಕೊಹ್ಲಿ ಬಿ ಸ್ರಾನ್ 149
ಜಾರ್ಜ್ ಬೈಲಿ ಸಿ ಕುಮಾರ್ ಬಿ ಅಶ್ವಿನ್ 112
ಮ್ಯಾಕ್ಸ್‌ವೆಲ್ ಸಿ ಧವನ್ ಬಿ ಅಶ್ವಿನ್ 06
ಮಿಚೆಲ್ ಮಾರ್ಷ್ ಔಟಾಗದೆ 12
ಜೇಮ್ಸ್ ಫಾಕ್ನರ್ ಔಟಾಗದೆ 01
ಇತರೆ17
ವಿಕೆಟ್ ಪತನ: 1-9, 2-21, 3-263,4-273, 5-308
ಬೌಲಿಂಗ್ ವಿವರ
ಸ್ರಾನ್ 9.2-0-56-3
ಬಿ.ಕುಮಾರ್ 9.0-0-42-0
ರೋಹಿತ್ ಶರ್ಮ 1.0-0-11-0
ಯು. ಯಾದವ್ 10.0-0-54-0
ಆರ್.ಜಡೇಜ 9.0-0-61-0
ಆರ್.ಅಶ್ವಿನ್ 9.0-0-68-2
ವಿ.ಕೊಹ್ಲಿ 2.0-0-13-0
ಪಂದ್ಯಶ್ರೇಷ್ಠ: ಸ್ಟೀವ್ ಸ್ಮಿತ್