×
Ad

ಅಫ್ರಿದಿ ರೆಸ್ಟೊರೆಂಟ್ ಬಿಲ್‌ ಪಾವತಿಸಿದ ನ್ಯೂಝಿಲೆಂಡ್ ಅಭಿಮಾನಿ!

Update: 2016-01-12 21:52 IST

  ಕರಾಚಿ, ಜ.12: ನ್ಯೂಝಿಲೆಂಡ್‌ನ ಆಕ್ಲೆಂಡ್ ನಗರದ ಫಾಸ್ಟ್ ಫುಡ್ ರೆಸ್ಟೋರೆಂಟ್‌ಗೆ ಊಟ ತರಲು ಹೋಗಿದ್ದ ಪಾಕಿಸ್ತಾನದ ಟ್ವೆಂಟಿ-20 ತಂಡದ ನಾಯಕ ಶಾಹಿದ್ ಅಫ್ರಿದಿ ಬಿಲ್ ಪಾವತಿಸಲಾಗದೆ ಮುಜುಗರಕ್ಕೀಡಾದ ಪ್ರಸಂಗ ನಡೆದಿದೆ. ಅಫ್ರಿದಿ ನ್ಯೂಝಿಲೆಂಡ್‌ನ ಕರೆನ್ಸಿಯನ್ನು ಹೊಂದಿರದ ಕಾರಣ ಬಿಲ್ ಪಾವತಿಸಲು ಸಾಧ್ಯವಾಗಿರಲಿಲ್ಲ.

ಆಗ ಅಲ್ಲಿಯೇ ಇದ್ದ ಅಫ್ರಿದಿಯ ಅಭಿಮಾನಿಯೋರ್ವ ಹೊಟೇಲ್ ಬಿಲ್ ಪಾವತಿಸುವ ಮೂಲಕ ತನ್ನ ಅಭಿಮಾನವನ್ನು ಮೆರೆದಿದ್ದಾರೆ.

 ಪಾಕಿಸ್ತಾನ ತಂಡ ಜ.15 ರಿಂದ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿಯನ್ನು ಆಡಲು ನ್ಯೂಝಿಲೆಂಡ್‌ಗೆ ತೆರಳಿದೆ. ಸೋಮವಾರ ಅಫ್ರಿದಿ ಹಾಗೂ ಅವರ ಸಹ ಆಟಗಾರ ಅಹ್ಮದ್ ಶೆಹಝಾದ್ ಆಕ್ಲೆಂಡ್ ಏರ್‌ಪೋರ್ಟ್ ಒಳಗಿರುವ ಮೆಕ್‌ಡೊನಾಲ್ಡ್ ರೆಸ್ಟೋರೆಂಟ್‌ಗೆ ಊಟ ತರಲು ತೆರಳಿದ್ದರು. ಅಫ್ರಿದಿ ಅವರು ಬಿಲ್ ಪಾವತಿಯ ವೇಳೆ ನ್ಯೂಝಿಲೆಂಡ್ ಕರೆನ್ಸಿಯ ಬದಲಿಗೆ ಅಮೆರಿಕನ್ ಡಾಲರ್‌ನ್ನು ಪಾವತಿಸಿದರು.

ಆದರೆ, ರೆಸ್ಟೋರೆಂಟ್‌ನವರು ಇದನ್ನು ಸ್ವೀಕರಿಸಲು ನಿರಾಕರಿಸಿದರು. ಆಗ ಅಲ್ಲಿಯೇ ಸರದಿ ಸಾಲಲ್ಲಿ ನಿಂತಿದ್ದ ಪಾಕಿಸ್ತಾನದ ಅಭಿಮಾನಿ ವಕಾಸ್ ನವೀದ್ ಎಂಬಾತ ಅಫ್ರಿದಿಯ ಬಿಲ್‌ನ್ನು ಪಾವತಿಸಿದ್ದಾರೆ.

‘‘ರೆಸ್ಟೋರೆಂಟ್‌ಗೆ ತೆರಳುವ ಮೊದಲು ನನಗೆ ಹಾಗೂ ಶೆಹಝಾದ್‌ಗೆ ಯುಎಸ್ ಡಾಲರ್‌ನ್ನು ನ್ಯೂಝಿಲೆಂಡ್ ಕರೆನ್ಸಿಯಾಗಿ ಪರಿವರ್ತಿಸಲು ಮರೆತುಹೋಗಿತ್ತು. ನಾವಿದ್ದ ಸರದಿ ಸಾಲಿನ ಹಿಂದೆ ಯುವಕನೊಬ್ಬ ನಿಂತಿದ್ದ. ಆತ ನಮ್ಮ ಬಿಲ್‌ನ್ನು ಪಾವತಿಸಿ. ಆ ಮೂಲಕ ಆತ ನಮ್ಮನ್ನು ನ್ಯೂಝಿಲೆಂಡ್‌ನಲ್ಲಿ ಸ್ವಾಗತಿಸಿದ್ದ’’ ಎಂದು ಅಫ್ರಿದಿ ಪಾಕಿಸ್ತಾನದ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News