ಎಂಸಿಎಲ್‌ನ ಲಿಬ್ರಾ ತಂಡಕ್ಕೆ ಗಂಗುಲಿ ನಾಯಕ
ಕೋಲ್ಕತಾ, ಜ.12: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್‌ನ(ಎಂಸಿಎಲ್) ಲಿಬ್ರಾ ಲೆಜೆಂಡ್ಸ್ ಫ್ರಾಂಚೈಸಿಯ ನಾಯಕ ಹಾಗೂ ರಾಯಭಾರಿ ಆಗಿ ಆಯ್ಕೆಯಾಗಿದ್ದಾರೆ.
43ರ ಹರೆಯದ ಗಂಗುಲಿ ಇತ್ತೀಚೆಗೆ ಸಚಿನ್ ತೆಂಡುಲ್ಕರ್ ನಾಯಕತ್ವದ ಕ್ರಿಕೆಟ್ ಆಲ್ ಸ್ಟಾರ್ಸ್ ಸರಣಿಯಲ್ಲಿ ಆಡಿದ್ದರು. ಜ.28 ರಿಂದ ದುಬೈನಲ್ಲಿ ಆರಂಭವಾಗಲಿರುವ ಎಂಸಿಎಲ್‌ನಲ್ಲಿ ಆಡಲು ಸಜ್ಜಾಗಿದ್ದಾರೆ.
ಲಿಬ್ರಾ ಲೆಜೆಂಡ್ಸ್ ತಂಡದಲ್ಲಿ ಇಂಗ್ಲೆಂಡ್‌ನ ಮಾಜಿ ಆಫ್ ಸ್ಪಿನ್ನರ್ ಗ್ರೇಮ್ ಸ್ವಾನ್,ದಕ್ಷಿಣ ಆಫ್ರಿಕದ ದಂತಕತೆ ಜಾಕ್ ಕಾಲಿಸ್, ಆಸ್ಟ್ರೇಲಿಯದ ವೇಗದ ಬೌಲರ್ ಶಾನ್ ಟೇಟ್ ಹಾಗೂ ಎಡಗೈ ಸ್ಪಿನ್ ಬೌಲರ್ ಬ್ರಾಡ್ ಹಾಗ್ ಅವರಿದ್ದಾರೆ. ಭಾರತದ ಮಾಜಿ ಬೌಲರ್ ಅಬೆಯ್ ಕುರುವಿಲ್ಲ ಕೋಚ್ ಆಗಿದ್ದಾರೆ.
‘‘ವಿಶ್ವ ದರ್ಜೆಯ ಆಟಗಾರರಾದ ಕಾಲಿಸ್, ಸ್ವಾನ್ ಹಾಗೂ ಬ್ರಾಡ್ ಹಾಗ್ ಅವರನ್ನೊಳಗೊಂಡ ತಂಡವನ್ನು ಮುನ್ನಡೆಸುವುದು ನನ್ನ ಪಾಲಿಗೆ ದೊಡ್ಡ ಗೌರವ. ತಾನು ಕಠಿಣ ಪಂದ್ಯಗಳನ್ನು ಎದುರು ನೋಡುತ್ತಿರುವೆ’’ಎಂದು ಗಂಗುಲಿ ಪ್ರತಿಕ್ರಿಯಿಸಿದ್ದಾರೆ.