ಫಿಫಾದ ಪ್ರಧಾನ ಕಾರ್ಯದರ್ಶಿ ಜೆರೊಮ್ ವಾಲ್ಕ್ ಉಚ್ಚಾಟನೆ
ಝೂರಿಕ್, ಜ.13: ಫುಟ್ಬಾಲ್ ವಿಶ್ವಕಪ್ ಟಿಕೆಟ್ ಮಾರಾಟದಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದಲ್ಲಿ ಪ್ರಧಾನ ಕಾರ್ಯದರ್ಶಿ ಜೆರೊಮ್ ವಾಲ್ಕ್ ಅವರನ್ನು ವಜಾಗೊಳಿಸಲಾಗಿದೆ ಎಂದು ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಬುಧವಾರ ತಿಳಿಸಿದೆ.
ಜ.9, 2016ರಲ್ಲಿ ನಡೆದ ಫಿಫಾದ ತುರ್ತು ಸಮಿತಿ ಸಭೆಯ ವೇಳೆ ವಾಲ್ಕ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಲು ನಿರ್ಧರಿಸಲಾಗಿತ್ತು. ಅವರೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಪಡಿಸಲಾಗಿದೆ. ವಾಲ್ಕ್ ಇನ್ನು ಮುಂದೆ ಫಿಫಾದ ಪ್ರಧಾನ ಕಾರ್ಯದರ್ಶಿಯಾಗಿರುವುದಿಲ್ಲ ಎಂದು ಫಿಫಾ ತಿಳಿಸಿದೆ.
ಫಿಫಾದ ಪ್ರಭಾವಿ ವ್ಯಕ್ತಿಯಾಗಿದ್ದ ವಾಲ್ಕ್ ಅವರು ಫಿಫಾದ ಅಧ್ಯಕ್ಷ ಸೆಪ್ ಬ್ಲಾಟರ್‌ರ ಬಲಗೈ ಬಂಟನಾಗಿದ್ದರು. ದಕ್ಷಿಣ ಆಫ್ರಿಕ ಹಾಗೂ ಬ್ರೆಝಿಲ್‌ನಲ್ಲಿ ನಡೆದ ಕಳೆದ ಎರಡು ಆವೃತ್ತಿಯ ವಿಶ್ವಕಪ್ ಟೂರ್ನಿಯ ಉಸ್ತುವಾರಿಯನ್ನು ವಹಿಸಿದ್ದರು. ಕಳೆದ ವಾರ ಫಿಫಾ ಎಥಿಕ್ಸ್ ಸಮಿತಿಯ ನ್ಯಾಯಾಧೀಶರು ಅಧಿಕೃತವಾಗಿ ವಾಲ್‌ಕ್ಕ್ೆ ವಿರುದ್ಧದ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದರು.
ವಾಲ್ಕ್‌ಗೆ ಫುಟ್ಬಾಲ್‌ನಿಂದ 9 ವರ್ಷಗಳ ಕಾಲ ನಿಷೇಧಕ್ಕೆ ಶಿಫಾರಸು ಮಾಡಿದ್ದರು. ವಾಲ್ಕ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ತಕ್ಷಣ ಸೆ.17 ರಂದು ಫಿಫಾದಿಂದ 90 ದಿನಗಳ ಕಾಲ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು.
ಹಗರಣದ ತನಿಖೆ ನಡೆಸುತ್ತಿರುವ ಎಥಿಕ್ಸ್ ಸಮಿತಿಯು ಕಳೆದ ವಾರ ವಾಲ್ಕ್ ವಿರುದ್ಧ ಅಮಾನತು ಅವಧಿಯನ್ನು 45 ದಿನಕ್ಕೆ ವಿಸ್ತರಿಸಿತ್ತು. ಅವರನ್ನು ಫುಟ್ಬಾಲ್‌ನ ಎಲ್ಲ ಚಟುವಟಿಕೆಗಳಿಂದ ನಿಷೇಧಿಸಲಾಗಿತ್ತು. ಮಾರ್ಕಸ್ ಕಾಟ್ನರ್ ಫಿಫಾದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಫಿಫಾ ಹೇಳಿದೆ.
2007ರಿಂದ ಬ್ಲಾಟರ್‌ರ ಬಲಗೈ ಬಂಟನಾಗಿ ಕೆಲಸ ಮಾಡಿದ್ದ ವಾಲ್ಕ್ ಹಲವು ಬಾರಿ ಫಿಫಾದ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರು. ವಾಲ್ಕ್ ವಿರುದ್ಧ ಉಡುಗೊರೆಗಳನ್ನು ಸ್ವೀಕರಿಸಿದ ಹಾಗೂ ಸ್ವಹಿತಾಸಕ್ತಿ ಸಂಘರ್ಷದ ಆರೋಪವನ್ನು ಎದುರಿಸುತ್ತಿದ್ದಾರೆ.