ಇಂದು ಎರಡನೆ ಏಕದಿನ ಪಂದ್ಯ:ಭಾರತಕ್ಕೆ ಬೌಲಿಂಗ್‌ನ ಚಿಂತೆ
ಬ್ರಿಸ್ಪೇನ್, ಜ.14: ಮೊದಲ ಪಂದ್ಯದಲ್ಲಿ ಬೆಟ್ಟದಂತಹ ಸವಾಲನ್ನು ಆಸ್ಟ್ರೇಲಿಯಕ್ಕೆ ವಿಧಿಸಿದ್ದರೂ, ಬೌಲಿಂಗ್ ವಿಭಾಗ ದುರ್ಬಲಗೊಂಡ ಹಿನ್ನೆಲೆಯಲ್ಲಿ ಭಾರತಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. ಶುಕ್ರವಾರ ಬ್ರಿಸ್ಬೇನ್‌ನಲ್ಲಿ ಎರಡನೆ ಪಂದ್ಯ ನಡೆಯಲಿದೆ.
ಆಸ್ಟ್ರೇಲಿಯದ ಜಾರ್ಜ್ ಬೈಲಿ ವಿಚಾರದಲ್ಲಿ ಅಂಪೈರ್ ನೀಡಿದ ಕೆಟ್ಟ ತೀರ್ಪು ಭಾರತದ ಸೋಲಿಗೆ ಇನ್ನೊಂದು ಕಾರಣವಾಯಿತು. ಒಂದು ವೇಳೆ ಬೈಲಿ ಔಟಾಗುತ್ತಿದ್ದರೆ ಪಂದ್ಯ ಫಲಿತಾಂಶ ಬದಲಾಗುವ ಸಾಧ್ಯತೆ ಇತ್ತು. ಭಾರತ 310 ರನ್‌ಗಳ ಕಠಿಣ ಸವಾಲನ್ನು ವಿಧಿಸಿದ್ದರೂ, ನಾಯಕ ಸ್ಟೀವ್ ಸ್ಮಿತ್ ಮತ್ತು ಜಾರ್ಜ್ ಬೈಲಿ ಶತಕಗಳ ಮೂಲಕ ಭಾರತದ ಕೈಯಲ್ಲಿದ್ದ ಗೆಲುವನ್ನು ಕಿತ್ತುಕೊಂಡಿದ್ದರು. ಆಸ್ಟ್ರೇಲಿಯ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಎರಡನೆ ಪಂದ್ಯದಲ್ಲಿ ಮತ್ತೆ ಭಾರತ ಹೋರಾಟ ಮುಂದುವರಿಸಲಿದೆ. ಆಸ್ಟ್ರೇಲಿಯವನ್ನು ಕಟ್ಟಿ ಹಾಕಬೇಕಾದರೆ ನಾಯಕ ಮಹೇಂದ್ರ ಸಿಂಗ್ ಧೋನಿ ಬೌಲಿಂಗ್ ವಿಭಾಗದಲ್ಲಿ ಸುಧಾರಣೆ ತರಬೇಕಾಗಿದೆ.
ಕಳೆದ ಪಂದ್ಯದಲ್ಲಿ ಸ್ಪಿನ್ ಜೋಡಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ವೈಫಲ್ಯದ ಕಾರಣದಿಂದಾಗಿ ಆಸ್ಟ್ರೇಲಿಯದ ಗೆಲುವಿಗೆ ಅಡ್ಡಿಯಾಗಲಿಲ್ಲ. ಜಡೇಜ 9 ಓವರ್‌ಗಳಲ್ಲಿ 61 ರನ್ ನೀಡಿ ಕೈ ಸುಟ್ಟುಕೊಂಡರು, ಅಶ್ವಿನ್ 9 ಓವರ್‌ಗಳಲ್ಲಿ 68 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಎರಡನೆ ಪಂದ್ಯಕ್ಕೆ ಧೋನಿ ನಾಲ್ವರು ವೇಗದ ಬೌಲರ್‌ಗಳಿಗೆ ಅವಕಾಶ ನೀಡಿದರೆ ಜಡೇಜ ಮತ್ತು ಅಶ್ವಿನ್ ಇವರಲ್ಲಿ ಯಾರಾದರೂ ಒಬ್ಬರು ಅಂತಿಮ ಹನ್ನೊಂದರಿಂದ ಹೊರಗುಳಿಯಬೇಕಾಗುತ್ತದೆ. ಚೊಚ್ಚಲ ಪಂದ್ಯದಲ್ಲಿ ಆಡುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದ ಯುವ ವೇಗಿ ಬರೀಂದರ್ ಸ್ರಾನ್ ಅದೇ ಪ್ರದರ್ಶನವನ್ನು ಮುಂದುವರಿಸುವುದನ್ನು ನಿರೀಕ್ಷಿಸಲಾಗಿದೆ. ಸ್ರಾನ್ 9.2 ಓವರ್‌ಗಳಲ್ಲಿ 56 ರನ್ ನೀಡಿ 3 ವಿಕೆಟ್ ಉಡಾಯಿಸಿದ್ದರು. ಅನುಭವಿ ವೇಗದ ಬೌಲರ್‌ಗಳಾದ ಭುವನೇಶ್ವರ ಕುಮಾರ್ ಮತ್ತು ಉಮೇಶ್ ಯಾದವ್ ಎದುರಾಳಿ ತಂಡದ ದಾಂಡಿಗರಿಗೆ ಹೆಚ್ಚು ತೊಂದರೆ ನೀಡಿರಲಿಲ್ಲ. ಇವರ ವೈಫಲ್ಯದ ಲಾಭವನ್ನು ಆಸ್ಟ್ರೇಲಿಯದ ದಾಂಡಿಗರು ಪಡೆದಿದ್ದರು. ತನ್ನ 2 ಓವರ್‌ನ ಮೂರನೆ ಎಸೆತದಲ್ಲಿ ಫಿಂಚ್ ನೀಡಿದ ರಿಟರ್ನ್ ಕ್ಯಾಚ್ ಪಡೆಯುವ ಮೂಲಕ ಸ್ರಾನ್ ಚೊಚ್ಚಲ ವಿಕೆಟ್ ಪಡೆದಿದ್ದರು. 4.4 ಓವರ್‌ನಲ್ಲಿ ವಾರ್ನರ್ ವಿಕೆಟ್ ಪಡೆದ ಸ್ರಾನ್ ಭಾರತಕ್ಕೆ ಬೇಗನೆ ಯಶಸ್ಸು ತಂದುಕೊಟ್ಟಿದ್ದರು. ಮುಂದಿನ ಎಸೆತದಲ್ಲಿ ಅಂದರೆ 4.5ನೆ ಓವರ್‌ನಲ್ಲಿ ವಿಕೆಟ್ ಪಡೆಯುವ ಸಾಧ್ಯತೆ ಇತ್ತು. ಆದರೆ ಅಂಪೈರ್ ಬೈಲಿಗೆ ಜೀವದಾನ ನೀಡಿದರು. ಇದು ಭಾರತದ ಪಾಲಿಗೆ ದುಬಾರಿಯಾಗಿ ಪರಿಣಮಿಸಿತ್ತು.
ಸ್ರಾವ್ ಅವರು ಅಂತಿಮವಾಗಿ ನಾಯಕ ಸ್ಟೀವ್ ಸ್ಮಿತ್ ವಿಕೆಟ್ ಪಡೆದರೂ ಅಷ್ಟರ ವೇಳೆಗೆ ಸ್ಮಿತ್ ತಂಡವನ್ನು ಗೆಲುವಿನ ಸಮೀಪಕ್ಕೆ ತಲುಪಿಸಿದ್ದರು. ಆದರೆ ಸ್ರಾನ್ 3ವಿಕೆಟ್ (9.2-0-56-3) ಪಡೆದು ಮೊದಲ ಪಂದ್ಯವನ್ನು ಸ್ಮರಣಿಯವನ್ನಾಗಿಸಿದ್ದರು.
ಭಾರತದ ರೋಹಿತ್ ಶರ್ಮ (ಔಟಾಗದೆ 171) ಮತ್ತು ಉಪನಾಯಕ ವಿರಾಟ್ ಕೊಹ್ಲಿ(91) ನೆರವಿನಲ್ಲಿ ಭಾರತ 309 ರನ್ ಗಳಿಸಿತ್ತು. ಭಾರತ ಇಷ್ಟರ ತನಕ ಪರ್ತ್‌ನಲ್ಲಿ ಇಷ್ಟೊಂದು ದೊಡ್ಡ ಸವಾಲನ್ನು ಆಸ್ಟ್ರೇಲಿಯಕ್ಕೆ ವಿಧಿಸಿರಲಿಲ್ಲ. ಭಾರತಕ್ಕೆ ಇದೀಗ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಅಪೂರ್ವ ಫಾರ್ಮ್‌ನಲ್ಲಿರುವುದು ದೊಡ್ಡ ಚಿಂತೆಯಾಗಿದೆ. ಅವರು ಇತ್ತೀಚಿನ ದಿನಗಳಲ್ಲಿ ಭಾರತದ ವಿರುದ್ಧ ಶತಕ ಗಳಿಸಿದೆ ಕ್ರೀಸ್‌ನಿಂದ ನಿರ್ಗಮಿಸುವುದೇ ಇಲ್ಲ. 149 ರನ್ ಸೇರಿಸುವ ಮೂಲಕ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಸ್ಮಿತ್ ಕಳೆದ 11 ಇನಿಂಗ್ಸ್‌ಗಳಲ್ಲಿ ಭಾರತದ ವಿರುದ್ಧ ಔಟಾಗದೆ 162, ಔಟಾಗದೆ 52 ಮತ್ತು ಕ್ರಮವಾಗಿ 133, 28, 192, 14, 117, 71, 47, 105 ಹಾಗೂ 149 ರನ್ ಗಳಿಸಿದ್ದಾರೆ. ಭಾರತ ಐದು ಪಂದ್ಯಗಳ ಸರಣಿ ಗೆಲ್ಲಬೇಕಾದರೆ ನಾಯಕ ಸ್ಮಿತ್‌ಗೆ ಬೇಗನೆ ಪೆವಿಲಿಯನ್ ಹಾದಿ ತೋರಿಸಬೇಕಾಗಿದೆ.
ಜಾರ್ಜ್ ಬೈಲಿ ಶತಕದ ಮೂಲಕ ಸ್ಮಿತ್‌ಗೆ ಸಾಥ್ ನೀಡಿದ್ದರು.ಅವರು 112 ರನ್ ಗಳಿಸಿ ಆಸ್ಟ್ರೇಲಿಯದ ಗೆಲುವಿಗೆ ಸಹಾಯ ಮಾಡಿದ್ದರು. ಅದೇ ಪ್ರದರ್ಶನ ಮುಂದುವರಿಸುವುದು ಬೈಲಿಯ ಯೋಜನೆಯಾಗಿದೆ.
ಎರಡನೆ ಪಂದ್ಯಕ್ಕೆ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಇಲ್ಲ. ಮಿಚೆಲ್ ಮಾರ್ಷ್ ಬದಲಿಗೆ ಅವರ ಸಹೋದರ ಶಾನ್ ಮಾರ್ಷ್ ಅವಕಾಶ ಪಡೆಯಲಿದ್ದಾರೆ. ಮಿಚೆಲ್ ಮಾರ್ಷ್‌ಗೆ ವಿಶ್ರಾಂತಿ ನೀಡಲಾಗಿದೆ. ವಾರ್ನರ್ ಬದಲಿಗೆ ಉಸ್ಮಾನ್ ಖ್ವಾಜಾ ಆರಂಭಿಕ ಬ್ಯಾಟ್ಸ್‌ಮನ್ ಸ್ಥಾವನ್ನು ತುಂಬಲಿದ್ದಾರೆ.
ಸಂಭಾವ್ಯ ತಂಡ
ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಮನೀಷ್ ಪಾಂಡೆ, ರವೀಂದ್ರ ಜಡೇಜ, ಆರ್ .ಅಶ್ವಿನ್/ರಿಶಿ ಧವನ್/ಇಶಾಂತ್ ಶರ್ಮ, ಉಮೇಶ್ ಯಾದವ್, ಭುವನೇಶ್ವರ ಕುಮಾರ್, ಬರೀಂದರ್ ಸ್ರಾನ್.
ಆಸ್ಟ್ರೇಲಿಯ: ಸ್ಟೀವ್ ಸ್ಮಿತ್(ನಾಯಕ), ಶಾನ್ ಮಾರ್ಷ್, ಆ್ಯರೊನ್‌ಫಿಂಚ್, ಜಾರ್ಜ್‌ಬೈಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಜೇಮ್ಸ್ ಫಾಕ್ನರ್, ಕೇನ್ ರಿಚರ್ಡ್ಸನ್/ಜಾನ್ ಹೇಸ್ಟಿಂಗ್ಸ್, ಸ್ಕಾಟ್ ಬೊಲೆಂಡ್, ಜೋಶ್ ಹೇಝಲ್‌ವುಡ್ , ಜೋಲ್ ಪ್ಯಾರಿಸ್.
ಪಿಚ್ ಮತ್ತು ವಾತಾವರಣ: ಪಿಚ್ ವೇಗದ ಬೌಲರ್‌ಗಳ ಸ್ನೇಹಿಯಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ.
ಹೈಲೈಟ್ಸ್
*ವಿರಾಟ್ ಕೊಹ್ಲಿಗೆ 7000 ರನ್ ಪೂರೈಸಲು 78 ರನ್‌ಗಳ ಆವಶ್ಯಕತೆ ಇದೆ.
*ಬರೀಂದರ್ ಸ್ರಾನ್ ಮೊದಲ ಪಂದ್ಯದಲ್ಲಿ 3 ವಿಕೆಟ್ ಪಡೆದ ಭಾರತದ 14ನೆ ಆಟಗಾರ.
ಪಂದ್ಯದ ಸಮಯ: ಬೆಳಗ್ಗೆ 8:50ಕ್ಕೆ ಆರಂಭ.