ಪರ್ಲ್ಸ್ ಹಗರಣ:ಯುವಿ-ಭಜ್ಜಿ ಆಸ್ತಿ ಮೇಲೆ ಸಿಬಿಐ ಕೆಂಗಣ್ಣು
ಹೊಸದಿಲ್ಲಿ, ಜ.14: ಪರ್ಲ್ಸ್ ಗ್ರೂಫ್ ಹಗರಣಕ್ಕೆ ಸಂಬಂಧಿಸಿ ಭಾರತದ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಆಸ್ತಿಯ ಮೇಲೆ ಸಿಬಿಐ ಕೆಂಗಣ್ಣು ಬೀರಿದೆ.
2011ರಲ್ಲಿ ವಿಶ್ವಕಪ್ ಜಯಿಸಿದ ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಯುವರಾಜ್ ಸಿಂಗ್ ಮತ್ತು ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಪರ್ಲ್ಸ್ ಗ್ರೂಪ್‌ನ ಗಿಫ್ಟ್ ಪಡೆದವರಲ್ಲಿ ಸೇರಿದ್ದಾರೆ. ಈ ಕಾರಣದಿಂದಾಗಿ ಅವರನ್ನು ಸಿಬಿಐ ತನಿಖೆಗೊಳಪಡಿಸಲಿದೆ.
ಹರ್ಭಜನ್ ಮತ್ತು ಯುವರಾಜ್ ಸಿಂಗ್ ಮೊಹಾಲಿಯಲ್ಲಿ ಪರ್ಲ್ಸ್ ಗ್ರೂಪ್‌ನಿಂದ ಗಿಫ್ಟ್ ರೂಪದಲ್ಲಿ ಪ್ಲಾಟ್ ಪಡೆದಿದ್ದಾರೆ ಎನ್ನಲಾಗಿದೆ. ಇದೀಗ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ(ಇಡಿ) ಇವುಗಳನ್ನು ವಶಕ್ಕೆ ತೆಗೆದುಕೊಂಡಿದೆ. ಪರ್ಲ್ಸ್ ಗ್ರೂಪ್ ತಾನು ವಿಶ್ವಕಪ್ ಜಯಿಸಿದ ತಂಡದ ಆಟಗಾರರಿಗೆ ಗಿಫ್ಟ್ ರೂಪದಲ್ಲಿ ಪ್ಲಾಟ್ ನೀಡಿರುವುದನ್ನು ಒಪ್ಪಿಕೊಂಡಿದೆ. ಆದರೆ ಯುವರಾಜ್ ಸಿಂಗ್ ತಾಯಿ ಶಬ್ನ್ನಮ್ ಸಿಂಗ್ ತನ್ನ ಕುಟುಂಬ ಪರ್ಲ್ಸ್ ಗ್ರೂಪ್‌ನಿಂದ ಅಂತಹ ಗಿಫ್ಟ್ ಪಡೆದಿಲ್ಲ ಎಂದು ಹೇಳಿದ್ದಾರೆ.
ಪರ್ಲ್ಸ್ ಗ್ರೂಪ್ ಕ್ರಿಕೆಟಿಗರೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡಿತ್ತು. ಆಸ್ಟ್ರೇಲಿಯದ ಮಾಜಿ ಪ್ರಮುಖ ವೇಗಿ ಬ್ರೆಟ್ ಲೀ ಅವರನ್ನು ತನ್ನ ರಾಯಭಾರಿಯನ್ನಾಗಿ ಸೇರಿಸಿಕೊಂಡಿತ್ತು. ಐಪಿಎಲ್ ಟೂರ್ನಿಗೆ ಈ ಹಿಂದೆ ಪ್ರಾಯೋಜಕತ್ವ ನೀಡಿತ್ತು. 2011ರಲ್ಲಿ ಭಾರತ ಮತ್ತು ವೆಸ್ಟ್‌ಇಂಡೀಸ್ ಸರಣಿಗೂ ಪರ್ಲ್ಸ್ ಗ್ರೂಪ್ ಪ್ರಾಯೋಜಕತ್ವ ವಹಿಸಿಕೊಂಡಿತ್ತು.
45,000 ಕೋಟಿ ರೂ.ಹಗರಣಕ್ಕೆ ಸಂಬಂಧಿಸಿ ಪರ್ಲ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ನಿರ್ಮಲ್ ಸಿಂಗ್ ಭಾಂಗೋ ಸೇರಿದಂತೆ ನಾಲ್ವರನ್ನು ಜನವರಿ 9ರಂದು ಬಂಧಿಸಲಾಗಿತ್ತು.