ಆ್ಯಪಿಯಾ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿ ಬೋಪಣ್ಣ-ಮರ್ಗಿಯಾ ಫೈನಲ್‌ಗೆ
ಸಿಡ್ನಿ, ಜ.15: ಭಾರತದ ರೋಹನ್ ಬೋಪಣ್ಣ ಹಾಗೂ ರೋಮಾನಿಯದ ಫ್ಲಾರಿನ್ ಮರ್ಗಿಯಾ ಆ್ಯಪಿಯಾ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ನೇರ ಸೆಟ್‌ಗಳಿಂದ ಗೆಲುವು ಸಾಧಿಸಿ ಫೈನಲ್‌ಗೆ ತಲುಪಿದ್ದಾರೆ. ಶುಕ್ರವಾರ ನಡೆದ ಪುರುಷರ ಡಬಲ್ಸ್‌ನ ಸೆಮಿ ಫೈನಲ್ ಪಂದ್ಯದಲ್ಲಿ ನಾಲ್ಕನೆ ಶ್ರೇಯಾಂಕದ ಬೋಪಣ್ಣ ಹಾಗೂ ಮರ್ಗಿಯಾ ಬ್ರೆಝಿಲ್-ಅರ್ಜೆಂಟೀನದ ಥಾಮಸ್ ಬೆಲ್ಲುಸ್ಸಿ ಹಾಗೂ ಲಿಯೊನಾರ್ಡೊ ಮಯೇರ್‌ರನ್ನು 7-6(8), 6-2 ಸೆಟ್‌ಗಳಿಂದ ಮಣಿಸಿ ಫೈನಲ್‌ಗೆ ತಲುಪಿದ್ದಾರೆ.
ಬೋಪಣ್ಣ-ಮರ್ಗಿಯಾ ಪ್ರಶಸ್ತಿ ಸುತ್ತಿನಲ್ಲಿ ಗ್ರೇಟ್ ಬ್ರಿಟನ್‌ನ ಜಮ್ಮಿ ಮರ್ರೆ ಹಾಗೂ ಬ್ರೆಝಿಲ್‌ನ ಬ್ರುನೊ ಸೊರೆಸ್‌ರನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿ ಫೈನಲ್‌ನಲ್ಲಿ ಸೊರೆಸ್ ಹಾಗೂ ಮರ್ರೆ ಅವರು ಪೊಲೆಂಡ್‌ನ ಲುಕಾಸ್ ಕುಬಾಟ್ ಹಾಗೂ ಮರ್ಸಿನ್ ಮಟ್ಕೊವ್‌ಸ್ಕಿ ಅವರನ್ನು 7-5, 2-6, 10-3 ಸೆಟ್‌ಗಳಿಂದ ಸೋಲಿಸಿದ್ದಾರೆ.
ಪ್ರಸ್ತುತ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿರುವ ಬೋಪಣ್ಣ ಕಳೆದ ವರ್ಷ ಕೆನಡಾದ ಡೇನಿಯಲ್ ನೆಸ್ಟರ್ ಜೊತೆಗೂಡಿ ಪ್ರಶಸ್ತಿ ಜಯಿಸಿದ್ದರು.
‘‘2016ರಲ್ಲಿ ಇದು ನನ್ನ ಮೊದಲ ಫೈನಲ್. ಫೈನಲ್‌ಗೆ ತಲುಪಿರುವುದಕ್ಕೆ ಸಂತೋಷವಾಗುತ್ತಿದೆ’’ ಎಂದು ಬೋಪಣ್ಣ ಟ್ವೀಟ್ ಮಾಡಿದ್ದಾರೆ.