ಆಸ್ಟ್ರೇಲಿಯನ್ ಓಪನ್: ಭಾಂಬ್ರಿಗೆ ಮೊದಲ ಸುತ್ತಿನಲ್ಲಿ ಕಠಿಣ ಸವಾಲು
ಮೆಲ್ಬೋರ್ನ್, ಜ.15: ಭಾರತದ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ಅವರು ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಕಠಿಣ ಸವಾಲು ಎದುರಿಸಲಿದ್ದಾರೆ. ಇದೇ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ನೇರವಾಗಿ ಪ್ರಮುಖ ಸುತ್ತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಯೂಕಿ ಮೊದಲ ಸುತ್ತಿನಲ್ಲಿ ವಿಶ್ವದ ನಂ.6ನೆ ಆಟಗಾರ ಥಾಮಸ್ ಬೆರ್ಡಿಕ್‌ರನ್ನು ಎದುರಿಸಲಿದ್ದಾರೆ.
2015ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ದಿಲ್ಲಿಯ ಯೂಕಿ ವೃತ್ತಿಜೀವನದಲ್ಲಿ ಮೊದಲ ಬಾರಿ ಅಗ್ರ-100ರಲ್ಲಿ ಸ್ಥಾನ ಪಡೆದಿದ್ದರು, ಈ ಹಿನ್ನೆಲೆಯಲ್ಲಿ ಅವರು ವರ್ಷದ ಮೊದಲ ಪ್ರಮುಖ ಟೂರ್ನಿಯಲ್ಲಿ ನೇರ ಪ್ರವೇಶ ಪಡೆದಿದ್ದಾರೆ. ಭಾರತದ ಇನ್ನೋರ್ವ ಆಟಗಾರ ಸಾಕೇತ್ ಮೈನೇನಿ ಅರ್ಹತಾ ಟೂರ್ನಿಯಲ್ಲಿ ಮೂರನೆ ಸುತ್ತು ತಲುಪುವುದರೊಂದಿಗೆ ಪ್ರಮುಖ ಸುತ್ತಿಗೆ ತೇರ್ಗಡೆಯಾಗುವ ಹಂತದಲ್ಲಿದ್ದಾರೆ. ಶುಕ್ರವಾರ ನಡೆದ ಎರಡನೆ ಕ್ವಾಲಿಫೈಯರ್ ಪಂದ್ಯದಲ್ಲಿ ಮೈನೇನಿ ಅವರು ಇಟಲಿಯ ಲೊರೆಂರೊ ಗ್ಲುಸ್ಟಿನೊರನ್ನು ಒಂದು ಗಂಟೆ, 25 ನಿಮಿಷಗಳ ಹೋರಾಟದಲ್ಲಿ 6-1, 7-6(7) ಸೆಟ್‌ಗಳಿಂದ ಮಣಿಸಿದ್ದಾರೆ.