ಮ್ಯಾಚ್-ಫಿಕ್ಸಿಂಗ್ ಹಗರಣ: ಪೆರೇರಾ,ಹೆರಾತ್ ವಿಚಾರಣೆ
ಕೊಲಂಬೊ, ಜ.15: ಮ್ಯಾಚ್-ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿ ಶ್ರೀಲಂಕಾದ ಅಪರಾಧ ತನಿಖಾ ವಿಭಾಗ ಶ್ರೀಲಂಕಾ ಕ್ರಿಕೆಟಿಗರಾದ ಕುಶಾಲ್ ಪೆರೇರಾ ಹಾಗೂ ರಂಗನಾ ಹೆರಾತ್ ಅವರನ್ನು ವಿಚಾರಣೆ ನಡೆಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತನ್ನನ್ನು ಬುಕ್ಕಿಯೋರ್ವ ಸಂಪರ್ಕಿಸಿದ್ದ ಎಂದು ಆರಂಭಿಕ ದಾಂಡಿಗ ಪೆರೇರಾ ಈ ಹಿಂದೆ ಲಂಕಾ ಅಧಿಕಾರಿಗಳಿಗೆ ಮಾಹಿತಿ ನೀಡಿ ಜಾಗೃತಗೊಳಿಸಿದ್ದರು. ಎಡಗೈ ಸ್ಪಿನ್ನರ್ ರಂಗನ ಹೆರಾತ್ ಅಕ್ಟೋಬರ್‌ನಲ್ಲಿ ಗಾಲೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಅವರ ಮೇಲೆ ಸಂಶಯ ಮೂಡಲು ಕಾರಣರಾಗಿದೆ.
ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಹಾಗೂ ಟೀಮ್ ಮ್ಯಾನೇಜರ್ ಜೆರ್ರಿ ವುರ್ಟೆಝರನ್ನು ಶ್ರೀಲಂಕಾದ ಅಪರಾಧ ತನಿಖಾ ಸಂಸ್ಥೆ ವಿಚಾರಣೆ ನಡೆಸಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮೂಲಗಳು ತಿಳಿಸಿವೆ. ಕ್ರೀಡಾ ಸಚಿವ ದಯಸಿರಿ ಜಯಶೇಖರ ನೀಡಿರುವ ದೂರಿನ ಮೇರೆಗೆ ಎಫ್‌ಸಿಐಡಿ ತನಿಖೆಯನ್ನು ಕೈಗೆತ್ತಿಕೊಂಡಿದೆ. ಕಳೆದ ವಾರ ಕೊನೆಗೊಂಡ ನ್ಯೂಝಿಲೆಂಡ್ ಪ್ರವಾಸದಲ್ಲಿ ಶ್ರೀಲಂಕಾ ಕಳಪೆ ಪ್ರದರ್ಶನ ನೀಡಿದ ನಂತರ ಜಯಶೇಖರ ತನಿಖೆ ನಡೆಸಲು ಮುಂದಾಗಿದ್ದಾರೆ. ನ್ಯೂಝಿಲೆಂಡ್ ವಿರುದ್ಧ ಟ್ವೆಂಟಿ-20 ಸರಣಿಯನ್ನು 0-2 ರಿಂದ ಸೋತಿದ್ದ ಶ್ರೀಲಂಕಾ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಕಳೆದುಕೊಂಡಿತ್ತು. ಟೆಸ್ಟ್ ಸರಣಿ ಯನ್ನು 0-2 ಹಾಗೂ ಏಕದಿನ ಸರಣಿಯನ್ನು 1-3 ಅಂತರದಿಂದ ಸೋತಿತ್ತು.