ಅತ್ಯಂತ ವೇಗವಾಗಿ 7 ಸಾವಿರ ರನ್, 24ನೆ ಶತಕ ಸಿಡಿಸಿದ ಕೊಹ್ಲಿ
ಮೆಲ್ಬೋರ್ನ್, ಜ.17: ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 7,000 ರನ್ ಹಾಗೂ 24ನೆ ಶತಕ ತಲುಪಿದ ಭಾರತದ ದಾಂಡಿಗ ವಿರಾಟ್ ಕೊಹ್ಲಿ ತಮ್ಮ ಮುಕುಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡರು.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ(ಎಂಸಿಜಿ) ರವಿವಾರ ನಡೆದ ಆಸ್ಟ್ರೇಲಿಯ ವಿರುದ್ಧದ ಮೂರನೆ ಏಕದಿನ ಪಂದ್ಯದಲ್ಲಿ ಕೊಹ್ಲಿ ಈ ಮೈಲುಗಲ್ಲು ತಲುಪಿದರು. ಪರ್ತ್ ಹಾಗೂ ಬ್ರಿಸ್ಬೇನ್‌ನಲ್ಲಿ ನಡೆದ ಮೊದಲೆರಡು ಏಕದಿನಗಳಲ್ಲಿ ಕ್ರಮವಾಗಿ 91 ಹಾಗೂ 59 ರನ್ ಗಳಿಸಿದ್ದ ಕೊಹ್ಲಿ ಮೂರನೆ ಏಕದಿನದಲ್ಲಿ ಕೊನೆಗೂ ಆಸ್ಟ್ರೇಲಿಯದ ವಿರುದ್ದ ಅದರದೇ ನೆಲದಲ್ಲಿ ಮೊದಲ ಶತಕ ಬಾರಿಸಿದರು.
ಜೇಮ್ಸ್ ಫಾಕ್ನರ್ ಎಸೆದ 10ನೆ ಓವರ್‌ನಲ್ಲಿ ಬೌಂಡರಿ ಬಾರಿಸಿದ ಕೊಹ್ಲಿ ಅತ್ಯಂತ ವೇಗವಾಗಿ 7,000 ರನ್ ಪೂರೈಸಿ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾದರು. ಈ ಮೂಲಕ ದಕ್ಷಿಣ ಆಫ್ರಿಕದ ದಾಂಡಿಗ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಮುರಿದರು. ವಿಲಿಯರ್ಸ್ 2014ರ ನವೆಂಬರ್‌ನಲ್ಲಿ ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ದ ಏಕದಿನ ಪಂದ್ಯದ ವೇಳೆ ವೇಗವಾಗಿ 7 ಸಾವಿರ ರನ್ ಪೂರೈಸಿದ್ದ ಸಾಧನೆ ಮಾಡಿದ್ದರು. 27ರ ಹರೆಯದ ಕೊಹ್ಲಿಗೆ ವಿಲಿಯರ್ಸ್ ದಾಖಲೆ ಮುರಿಯಲು 19 ರನ್ ಅಗತ್ಯವಿತ್ತು. ಕೊಹ್ಲಿ 169ನೆ ಪಂದ್ಯದ 161ನೆ ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ತಲುಪಿದರು. ಡಿವಿಲಿಯರ್ಸ್ 172ನೆ ಪಂದ್ಯದ 166ನೆ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.
117 ಎಸೆತಗಳಲ್ಲಿ 117 ರನ್ ಗಳಿಸಿದ ಕೊಹ್ಲಿ ಅತ್ಯಂತ ವೇಗವಾಗಿ 24ನೆ ಶತಕ ಸಿಡಿಸಿದ ಸಾಧನೆಯನ್ನೂ ಮಾಡಿದರು. ಕೊಹ್ಲಿ 169ನೆ ಪಂದ್ಯದಲ್ಲಿ 24ನೆ ಶತಕ ಬಾರಿಸಿದರು. ಅತ್ಯಂತ ವೇಗವಾಗಿ 7 ಸಾವಿರ ರನ್ ಹಾಗೂ 24 ಶತಕಗಳನ್ನು ಬಾರಿಸಿರುವ ಕೊಹ್ಲಿ ಭಾರತದ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ಸಾಧನೆಯನ್ನು ಹಿಂದಿಕ್ಕಿದರು. ತೆಂಡುಲ್ಕರ್ 219ನೆ ಇನಿಂಗ್ಸ್‌ನಲ್ಲಿ 24ನೆ ಶತಕ ಹಾಗೂ 189ನೆ ಇನಿಂಗ್ಸ್‌ನಲ್ಲಿ 7 ಸಾವಿರ ರನ್ ಪೂರೈಸಿದ್ದರು.
ರೋಹಿತ್ ಶರ್ಮ(6) ಔಟಾದ ನಂತರ ಕ್ರೀಸ್‌ಗೆ ಇಳಿದ ಕೊಹ್ಲಿ ಇನ್ನೋರ್ವ ಆರಂಭಿಕ ದಾಂಡಿಗ ಶಿಖರ್ ಧವನ್‌ರೊಂದಿಗೆ 2ನೆ ವಿಕೆಟ್‌ಗೆ 119 ರನ್ ಜೊತೆಯಾಟ ನಡೆಸಿದರು. ಇದು ಎಂಸಿಜಿಯಲ್ಲಿ ಭಾರತ ದಾಂಡಿಗರು ನಡೆಸಿರುವ ಗರಿಷ್ಠ ಜೊತೆಯಾಟವಾಗಿದೆ. 1981ರಲ್ಲಿ ಸುನಿಲ್ ಗವಾಸ್ಕರ್ ಹಾಗೂ ದಿಲಿಪ್ ವೆಂಗ್‌ಸರ್ಕಾರ್ ನಡೆಸಿದ್ದ 101 ರನ್ ಈ ವರೆಗಿನ ಗರಿಷ್ಠ ಜೊತೆಯಾಟವಾಗಿತ್ತು.
ಅತ್ಯಂತ ವೇಗವಾಗಿ 7 ಸಾವಿರ ರನ್ ಪೂರೈಸಿದ ದಾಂಡಿಗರು
ಆಟಗಾರ ಎದುರಾಳಿ ಮೈದಾನ ಪಂದ್ಯ ಇನಿಂಗ್ಸ್
ಕೊಹ್ಲಿ(ಭಾರತ) ಆಸ್ಟ್ರೇಲಿಯ ಮೆಲ್ಬೋರ್ನ್(2016) 169 161
ವಿಲಿಯರ್ಸ್(ಆಫ್ರಿಕ) ಆಸ್ಟ್ರೇಲಿಯ ಪರ್ತ್(2014) 172 166
ಗಂಗುಲಿ(ಭಾರತ) ಕೀನ್ಯ ಪಾರ್ಲ್(2001) 180 174
ಲಾರಾ(ವಿಂಡೀಸ್) ದ.ಆಫ್ರಿಕ ಸೈಂಟ್ ಜಾರ್ಜ್(2001) 187 183
ಹೇನ್ಸ್(ವಿಂಡೀಸ್)ಭಾರತ ಅಡಿಲೇಡ್(1991) 188 187
ಕಾಲಿಸ್(ದ.ಆಫ್ರಿಕ)ಶ್ರೀಲಂಕಾ ಕೊಲಂಬೊ(2004)197 188
ತೆಂಡುಲ್ಕರ್(ಭಾರತ)ಶ್ರೀಲಂಕಾ ಕೊಲಂಬೊ(1998)196 189
..........
ಅತ್ಯಂತ ವೇಗವಾಗಿ ಏಕದಿನ ರನ್‌ಗಳ ಮೈಲುಗಲ್ಲು ತಲುಪಿದ ಆಟಗಾರರು
6000 ರನ್: ಹಾಶಿಮ್ ಅಮ್ಲ, 123 ಇನಿಂಗ್ಸ್
7000 ರನ್: ವಿರಾಟ್ ಕೊಹ್ಲಿ, 161 ಇನಿಂಗ್ಸ್
8000 ರನ್: ಎಬಿ ಡಿವಿಲಿಯರ್ಸ್, 182 ಇನಿಂಗ್ಸ್
9000 ರನ್: ಸೌರವ್ ಗಂಗುಲಿ, 228 ಇನಿಂಗ್ಸ್
10,000 ರನ್: ಸಚಿನ್ ತೆಂಡುಲ್ಕರ್, 259 ಇನಿಂಗ್ಸ್