ಮುಂಬೈ ಮ್ಯಾರಥಾನ್: ಕಿಪ್‌ಕೆಟೆರ್ ಚಾಂಪಿಯನ್

Update: 2016-01-17 18:15 GMT

ಮುಂಬೈ, ಜ.17: ವಾಣಿಜ್ಯ ನಗರಿ ಮುಂಬೈನಲ್ಲಿ ರವಿವಾರ ನಡೆದ 13ನೆ ಆವೃತ್ತಿಯ ಸ್ಟಾಂಡರ್ಡ್ ಚಾರ್ಟರ್ಡ್ ಮುಂಬೈ ಮ್ಯಾರಥಾನ್‌ನಲ್ಲಿ ಆಫ್ರಿಕದ ಅಥ್ಲೀಟ್‌ಗಳು ಸಂಪೂರ್ಣ ಮೇಲುಗೈ ಸಾಧಿಸಿದ್ದು, ಕೀನ್ಯದ ಓಟಗಾರ ಗಿಡಿಯೊನ್ ಕಿಪ್‌ಕೆಟೆರ್ ಪುರುಷರ ಚಾಂಪಿಯನ್ ಎನಿಸಿಕೊಂಡರು.

ಇಥಿಯೋಪಿಯದ ಶುಕೊ ಗೆನೆಮೊ(2:27:50) ಮಹಿಳೆಯರ ಚಾಂಪಿಯನ್ ಕಿರೀಟ ಧರಿಸಿದರು. 2:08:35 ಸೆಕೆಂಡ್‌ನಲ್ಲಿ ಗುರಿ ತಲುಪಿದ ಕಿಪ್‌ಕೆಟೆರ್ 2013ರಲ್ಲಿ ಉಗಾಂಡದ ಜಾಕ್ಸನ್ ಕಿಪ್ರೊಪ್ ಬರೆದಿದ್ದ ದಾಖಲೆಯನ್ನು ಮುರಿದರು. ಈ ಸಾಧನೆಗಾಗಿ 56,000 ಡಾಲರ್‌ನೊಂದಿಗೆ 15,00 ಡಾಲರ್ ಬೋನಸ್‌ನ್ನು ಪಡೆದುಕೊಂಡರು.

ಭಾರತದ ಓಟಗಾರರು ನಾಲ್ಕು ಹಳೆಯ ದಾಖಲೆಯನ್ನು ಮುರಿದರು. ಪುಣೆಯ ಆರ್ಮಿ ಸ್ಪೋರ್ಟ್ಸ್ ಸಂಸ್ಥೆಯ ಓಟಗಾರರಾದ ನಿತೇಂದ್ರ ಸಿಂಗ್ ರಾವತ್ ಹಾಗೂ ಗೋಪಿ ಟಿ. 2:16:59 ಸೆಕೆಂಡ್‌ನಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿದರು. ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಉತ್ತರಖಂಡದ ರಾವತ್ 2:15:48 ಸೆಕೆಂಡ್‌ನಲ್ಲಿ ಗುರಿ ತಲುಪಿ 10ನೆ ಸ್ಥಾನ ಪಡೆದರು. ಭಾರತದ ಅಥ್ಲೀಟ್‌ಗಳಾದ ಸುಧಾ ಸಿಂಗ್ 7ನೆ, ಲಲಿತಾ ಬಾಬರ್ ಹಾಗೂ ಒಪಿ ಜೈಶಾ ಕ್ರಮವಾಗಿ 10 ಹಾಗೂ 11ನೆ ಸ್ಥಾನ ಪಡೆದಿದ್ದಾರೆ.

ಗೋಪಿ, ಖೇತ ರಾಮ್ ಒಲಿಂಪಿಕ್ಸ್‌ಗೆ

ಮುಂಬೈ, ಜ.17: ಮುಂಬೈ ಮ್ಯಾರಥಾನ್‌ನಲ್ಲಿ ಭಾರತೀಯ ಓಟಗಾರರ ಪೈಕಿ ಕ್ರಮವಾಗಿ ಎರಡನೆ ಹಾಗೂ ಮೂರನೆ ಸ್ಥಾನವನ್ನು ಪಡೆದುಕೊಂಡಿರುವ ಅಥ್ಲೀಟ್‌ಗಳಾದ ಗೋಪಿ ಟಿ. ಹಾಗೂ ಖೇತ ರಾಮ್ ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಗೋಪಿ 2:16:15 ನಿಮಿಷದಲ್ಲಿ ಗುರಿ ತಲುಪಿದರೆ, ರಾಮ್ 2:17:23 ನಿಮಿಷದಲ್ಲಿ ಗುರಿ ತಲುಪಿ ಒಲಿಂಪಿಕ್ಸ್‌ಗೆ ತೇರ್ಗಡೆಯಾದರು. ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು 2 ಗಂಟೆ, 19 ನಿಮಿಷಗಳಲ್ಲಿ ಗುರಿ ತಲುಪಬೇಕಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News