×
Ad

ಆಸ್ಟ್ರೇಲಿಯನ್ ಓಪನ್ ಇಂದು ಆರಂಭ

Update: 2016-01-17 23:46 IST

ಸಾನಿಯಾ, ಬೋಪಣ್ಣಗೆ ಪ್ರಶಸ್ತಿಯ ನಿರೀಕ್ಷೆ

ಮೆಲ್ಬೋರ್ನ್, ಜ.17: ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್ ಸೋಮವಾರ ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿದ್ದು, ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸನ್ ಸ್ಟೆಫಿಗ್ರಾಫ್ ಹೆಸರಲ್ಲಿರುವ 22 ಗ್ರಾನ್‌ಸ್ಲಾಮ್ ಪ್ರಶಸ್ತಿ ದಾಖಲೆಯನ್ನು ಸರಿಗಟ್ಟಲು ಎದುರು ನೋಡುತ್ತಿದ್ದಾರೆ.

 2015ರಲ್ಲಿ ಪ್ರಾಬಲ್ಯ ಸಾಧಿಸಿದ್ದ ಸೆರೆನಾ ಇದೀಗ ಮಂಡಿನೋವಿನಿಂದ ಚೇತರಿಸಿಕೊಂಡಿದ್ದು, ಏಳನೆ ಆಸ್ಟ್ರೇಲಿಯನ್ ಓಪನ್ ಕಿರೀಟ ಧರಿಸುವತ್ತ ಚಿತ್ತವಿರಿಸಿದ್ದಾರೆ.

2003ರಲ್ಲಿ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಸಹೋದರಿ ವೀನಸ್‌ರನ್ನು ಮಣಿಸಿ ಚೊಚ್ಚಲ ಪ್ರಶಸ್ತಿಯನ್ನು ಜಯಿಸಿದ್ದ ಸೆರೆನಾಗೆ ಈ ಬಾರಿ ರಶ್ಯದ ಮರಿಯಾ ಶರಪೋವಾರಿಂದ ಕಠಿಣ ಸ್ಪರ್ಧೆ ಎದುರಾಗಿದೆ.

ಪ್ರಶಸ್ತಿ ನಿರೀಕ್ಷೆಯಲ್ಲಿ ಸಾನಿಯಾ, ಬೋಪಣ್ಣ: ಭಾರತದ ಸಾನಿಯಾ ಮಿರ್ಝಾ ಹಾಗೂ ಸ್ವಿಸ್‌ನ ಮಾರ್ಟಿನಾ ಹಿಂಗಿಸ್, ರೋಹನ್ ಬೋಪಣ್ಣ ಹಾಗೂ ಫ್ಲಾರಿನ್ ಮೆರ್ಗಿಯಾ ಸೋಮವಾರದಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಡಬಲ್ಸ್ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದಾರೆ.

ಸತತ 30 ಪಂದ್ಯಗಳಲ್ಲಿ ಜಯ ಗಳಿಸಿರುವ ಸಾನಿಯಾ-ಮಾರ್ಟಿನಾ ಜೋಡಿ ವಿಶ್ವದ ನಂ.1 ಡಬಲ್ಸ್ ಆಟಗಾರ್ತಿಯರಾಗಿದ್ದಾರೆ. ಕಳೆದ ವರ್ಷ ಯುಎಸ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ್ನು ಜಯಿಸಿದ್ದ ಸಾನಿಯಾ-ಮಾರ್ಟಿನಾ ಜೋಡಿ ಈ ವರ್ಷ ಪ್ರಶಸ್ತಿ ಜಯಿಸುವ ಫೇವರಿಟ್ ಎನಿಸಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ 11 ಪ್ರಶಸ್ತಿಗಳನ್ನು ಜಯಿಸಿರುವ ಈ ಜೋಡಿ 3ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.

ಟೂರ್ನಿಯಲ್ಲಿ ಭಾರತದ ಒಟ್ಟು ಆರು ಆಟಗಾರರು ಭಾಗವಹಿಸುತ್ತಿದ್ದಾರೆ. ಯೂಕಿ ಭಾಂಬ್ರಿ ಸಿಂಗಲ್ಸ್‌ನಲ್ಲಿ ಆಡುತ್ತಿರುವ ಏಕೈಕ ಆಟಗಾರನಾಗಿದ್ದಾರೆ. ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿರುವ ಸಾನಿಯಾ ಹಾಗೂ ಬೋಪಣ್ಣ ಪ್ರಶಸ್ತಿಯ ನಿರೀಕ್ಷೆ ಮೂಡಿಸಿದ್ದಾರೆ.

ಲಿಯಾಂಡರ್ ಪೇಸ್ ಅವರು ಫ್ರಾನ್ಸ್‌ನ ಜೆರೆಮಿ ಚಾರ್ಡಿ ಅವರೊಂದಿಗೆ, ಮಹೇಶ್ ಭೂಪತಿ ಅವರು ಲಕ್ಸಂಬರ್ಗ್‌ನ ಗಿಲ್ಲೆಸ್ ಮುಲ್ಲರ್‌ರೊಂದಿಗೆ ಡಬಲ್ಸ್ ಆಡಲಿದ್ದಾರೆ. ಪೂರವ್ ರಾಜಾ ಅವರು ಕ್ರೊವೇಷಿಯದ ಇವೊ ಕಾರೊವಿಕ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News