×
Ad

ಟ್ವೆಂಟಿ-20 ಕ್ರಿಕೆಟ್: ಯುವರಾಜ್ ವಿಶ್ವ ದಾಖಲೆ ಸರಿಗಟ್ಟಿದ ಗೇಲ್

Update: 2016-01-18 18:23 IST

12 ಎಸೆತಗಳಲ್ಲಿ 50 ರನ್

ಹೊಸದಿಲ್ಲಿ, ಜ.18: ವೆಸ್ಟ್‌ಇಂಡೀಸ್‌ನ ಸ್ಫೋಟಕ ಆರಂಭಿಕ ದಾಂಡಿಗ ಕ್ರಿಸ್ ಗೇಲ್ ಟ್ವೆಂಟಿ-20 ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸುವ ಮೂಲಕ ಭಾರತದ ಆಲ್‌ರೌಂಡರ್ ಯುವರಾಜ್ ಸಿಂಗ್‌ರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

  ಇತ್ತೀಚೆಗಿನ ದಿನಗಳಲ್ಲಿ ಕೆಟ್ಟ ವಿಷಯಗಳಿಗೆ ಸುದ್ದಿಯಾಗಿದ್ದ ಗೇಲ್ ಸೋಮವಾರ ಆಸ್ಟ್ರೇಲಿಯದಲ್ಲಿ ನಡೆದ ದೇಶೀಯ ಟ್ವೆಂಟಿ-20 ಟೂರ್ನಿ ಬಿಗ್ ಬ್ಯಾಶ್ ಲೀಗ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್‌ ತಂಡದ ವಿರುದ್ಧ ಮೆಲ್ಬೋರ್ನ್ ರೆನಗೆಡ್ಸ್ ತಂಡದ ಪರ ಬಿರುಗಾಳಿ ಬ್ಯಾಟಿಂಗ್ ಮಾಡಿದರು. 7 ಸಿಕ್ಸರ್ ಹಾಗೂ 2 ಬೌಂಡರಿಗಳನ್ನು ಸಿಡಿಸಿದ ಎಡಗೈ ದಾಂಡಿಗ ಗೇಲ್ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

17 ಎಸೆತಗಳಲ್ಲಿ 56 ರನ್ ಗಳಿಸಿ ಔಟಾದರು. ಗೇಲ್ 12 ಎಸೆತಗಳಲ್ಲಿ ಗಳಿಸಿದ ರನ್-2,0,6,6,6,6,2,6, 6, 4,1,6. ಗೇಲ್ ಅಡಿಲೇಡ್ ತಂಡದ ಬೌಲರ್ ಗ್ರೆಗ್ ವೆಸ್ಟ್ ಓವರ್‌ವೊಂದರಲ್ಲಿ 27 ರನ್ ಗಳಿಸಿದರು.

ಯುವರಾಜ್ ಸಿಂಗ್ 2007ರಲ್ಲಿ ದಕ್ಷಿಣ ಆಫ್ರಿಕದ ಡರ್ಬನ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಗ್ರೂಪ್ ಪಂದ್ಯದಲ್ಲಿ ಅತ್ಯಂತ ವೇಗವಾಗಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇಂಗ್ಲೆಂಡ್ ವಿರುದ್ಧದ ಆ ಪಂದ್ಯದಲ್ಲಿ ಯುವಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಎಸೆದ ಒಂದೇ ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಸಿಡಿಸಿ ಅತ್ಯಂತ ವೇಗದ ಅರ್ಧಶತಕ ಪೂರೈಸಿದ್ದರು. ಕೇವಲ 12 ಎಸೆತಗಳಲ್ಲಿ 50 ರನ್ ಪೂರೈಸಿದ್ದ ಯುವಿ ಇನಿಂಗ್ಸ್‌ನಲ್ಲಿ 6 ಸಿಕ್ಸರ್, 3 ಬೌಂಡರಿಗಳಿದ್ದವು.

ಟ್ವೆಂಟಿ-20ಯಲ್ಲಿ ಅತ್ಯಂತ ವೇಗದ ಟಾಪ್-3 ಅರ್ಧಶತಕಗಳು

12 ಎಸೆತ: ಕ್ರಿಸ್ ಗೇಲ್(ಮೆಲ್ಬೋರ್ನ್ ರೆನೆಗೆಡ್ಸ್)

12 ಎಸೆತ: ಯುವರಾಜ್ ಸಿಂಗ್(ಭಾರತ)

13 ಎಸೆತ: ಮಾರ್ಕಸ್ ಟ್ರೆಸ್ಕೊತಿಕ್(ಸಮರ್‌ಸೆಟ್, ಇಂಗ್ಲೆಂಡ್)

14 ಎಸೆತ: ಇಮ್ರಾನ್ ನಝೀರ್(ಸಿಯಾಲ್‌ಕೊಟ್ ಸ್ಟಾಲಿಯನ್ಸ್, ಪಾಕಿಸ್ತಾನ), ಕೀರನ್‌ಪೊಲಾರ್ಡ್(ಟ್ರಿನಿಡಾಡ್ ಆ್ಯಂಡ್ ಟೊಬಾಗೊ, ವೆಸ್ಟ್‌ಇಂಡೀಸ್), ಕಾಲಿನ್ ಮುನ್ರೊ(ನ್ಯೂಝಿಲೆಂಡ್), ಗೆರಾರ್ಡ್ ಬ್ರೋಫಿ(ಯಾರ್ಕ್‌ಶೈರ್,ಇಂಗ್ಲೆಂಡ್), ಕೀರನ್ ನಾಯಿಮ-ಬಾರ್ನೆಟ್(ಸೆಂಟ್ರಲ್ ಡಿಸ್ಟ್ರಿಕ್ಸ್, ನ್ಯೂಝಿಲೆಂಡ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News