ಜ.31: ಭಾರತ-ಆಸ್ಟ್ರೇಲಿಯ ನಡುವೆ ಪಿಂಕ್ ಟ್ವೆಂಟಿ-20 ಪಂದ್ಯ
ಸಿಡ್ನಿ, ಜ.18: ಮೆಕ್‌ಗ್ರಾತ್ ಫೌಂಡೇಶನ್‌ಗೆ ಬೆಂಬಲ ನೀಡುವ ಸಲುವಾಗಿ ಮುಂಬರುವ ಭಾರತ ಹಾಗೂ ಆಸ್ಟ್ರೇಲಿಯ ನಡುವೆ ನಡೆಯಲಿರುವ ಮೂರನೆ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯ ಗುಲಾಬಿ ಬಣ್ಣದಿಂದ ಕೂಡಿರಲಿದೆ.
ಪ್ರತಿವರ್ಷ ನಡೆಯಲಿರುವ ಪಿಂಕ್ ಟೆಸ್ಟ್ ಪಂದ್ಯ ಮಳೆಯಿಂದಾಗಿ ಈ ವರ್ಷ ನಡೆದಿರಲಿಲ್ಲ. ಆಸ್ಟ್ರೇಲಿಯ ಹಾಗೂ ವೆಸ್ಟ್‌ಇಂಡೀಸ್ ನಡುವಿನ ಸಿಡ್ನಿ ಪಿಂಕ್ ಟೆಸ್ಟ್‌ನ ಮೂಲಕ ಮೆಕ್‌ಗ್ರಾತ್ ಫೌಂಡೇಶನ್ 380,000 ಡಾಲರ್ ನಿಧಿ ಸಂಗ್ರಹಿಸಲು ಉದ್ದೇಶಿಸಿತ್ತು.
ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ ಕಾರಣ ನಿಧಿ ಸಂಗ್ರಹ ನಿರೀಕ್ಷಿತ ಗುರಿ ತಲುಪಿರಲಿಲ್ಲ. ಮೆಕ್‌ಗ್ರಾತ್ ಫೌಂಡೇಶನ್ ಕ್ಯಾನ್ಸರ್ ಪೀಡಿತರಿಗೆ ನೆರವು ನೀಡಲು ಕಳೆದ ಕೆಲವು ವರ್ಷಗಳಿಂದ ನಿಧಿ ಸಂಗ್ರಹಿಸುವ ಅಭಿಯಾನ ನಡೆಸುತ್ತಿದೆ.
‘‘ಸಿಡ್ನಿ ಟೆಸ್ಟ್‌ನಲ್ಲಿ ಪದೇ ಪದೇ ಮಳೆ ಅಡ್ಡಿಪಡಿಸಿದ ಹೊರತಾಗಿಯೂ 250,000 ಡಾಲರ್ ನಿಧಿ ಸಂಗ್ರಹವಾಗಿತ್ತು. ಪ್ರಕೃತಿ ನಮ್ಮ ಹಿಡಿತದಲ್ಲಿಲ್ಲ. ಜ.31 ರಂದು ನಡೆಯಲಿರುವ 3ನೆ ಟ್ವೆಂಟಿ-20 ಪಂದ್ಯದಲ್ಲಿ ಮೆಕ್‌ಗ್ರಾತ್ ಫೌಂಡೇಶನ್‌ಗೆ ನಿಧಿ ಸಂಗ್ರಹಿಸುವ ಗುರಿ ಹೊಂದಿದ್ದೇವೆ’’ಎಂದು ಕ್ರಿಕೆಟ್ ಆಸ್ಟ್ರೇಲಿಯದ ಸಿಇಒ ಜೇಮ್ಸ್ ಸದರ್ನ್‌ಲೆಂಡ್ ತಿಳಿಸಿದ್ದಾರೆ.