×
Ad

ಧೋನಿಗೆ ಮತ್ತೊಮ್ಮೆ ಜಾಮೀನುರಹಿತ ವಾರೆಂಟ್

Update: 2016-01-19 21:07 IST

 ಅನಂತಪುರ, ಜ.19: ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಜಾಹೀರಾತಿನ ಫೋಟೊದಲ್ಲಿ ವಿಷ್ಣು ರೂಪದಲ್ಲಿ ಕಾಣಿಸಿಕೊಂಡು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪ ಎದುರಿಸುತ್ತಿರುವ ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಅನಂತಪುರದ ಸ್ಥಳೀಯ ನ್ಯಾಯಾಲಯ ಇಂದು ಮತ್ತೊಮ್ಮೆ ಜಾಮೀನುರಹಿತ ವಾರೆಂಟ್ ಹೊರಡಿಸಿದೆ.
ಜ.7ರಂದು ಹೊರಡಿಸಿದ ಆದೇಶದದಲ್ಲಿ ಧೋನಿ ಫೆ.25ರ ಮೊದಲು ಹಾಜರಾಗದಿದ್ದರೆ ಅವರನ್ನು ಬಂಧಿಸುವಂತೆ ನ್ಯಾಯಾಲಯ ತಿಳಿಸಿತ್ತು.

ಧೋನಿ ಪರ ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಿದ ದಿಲ್ಲಿ ಮೂಲದ ವಕೀಲರಾದ ರಜನೀಶ್ ಚೋಪ್ರಾ ಮತ್ತು ಪಂಕಜ್ ಭಾಗ್ಲಾ ಅವರು ಮ್ಯಾಜಿಸ್ಟ್ರೇಟ್ ಗೀತಾವಾಣಿ ಅವರಲ್ಲಿ ಜನವರಿ 7ರಂದು ಧೋನಿಗೆ ಹೊರಡಿಸಲಾದ ಜಾಮೀನುರಹಿತ ವಾರೆಂಟ್ ಆದೇಶದ ಪ್ರತಿ ತಲುಪಿಲ್ಲ ಎಂದು ಹೇಳಿ ಮತ್ತೊಮ್ಮೆ ಆದೇಶಕ್ಕೆ ಮನವಿ ಮಾಡಿದರು. ಧೋನಿ ಪ್ರಸ್ತುತ ಆಸ್ಟ್ರೇಲಿಯ ತಂಡವನ್ನು ಮುನ್ನಡೆಸುವ ಕಾರಣದಿಂದಾಗಿ ಬ್ಯುಸಿಯಾಗಿದ್ದಾರೆ. ಈ ಕಾರಣದಿಂದಾಗಿ ಅವರಿಗೆ ತಕ್ಷಣ ಹಾಜರಾಗಲು ಸಾಧ್ಯವಿಲ್ಲ ಎಂದು ವಕೀಲರಾದ ವಿಷ್ಣುವರ್ಧನ ರೆಡ್ಡಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು, 2013 ಎಪ್ರಿಲ್‌ನಲ್ಲಿ ‘ಬ್ಯುಸಿನೆಸ್ ಟುಡೆ’ ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ಜಾಹೀರಾತಿನ ಫೋಟೊದಲ್ಲಿ ಲಾರ್ಡ್ ವಿಷ್ಣುವಿನಂತೆ ಧೋನಿಯನ್ನು ಚಿತ್ರಿಸಲಾಗಿತ್ತು. ಚಿತ್ರದಲ್ಲಿ ವಿಷ್ಣುವಾಗಿ ಧೋನಿ ಕೈಯಲ್ಲಿ ಶೂ ಮತ್ತಿತರ ಉತ್ಪನ್ನಗಳನ್ನು ಹಿಡಿದಿರುವುದು ವಿವಾದಕ್ಕೆ ಕಾರಣವಾಗಿತ್ತು.
 ಧೋನಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಸ್ಥಳೀಯ ವಿಎಚ್‌ಪಿ ಧುರೀಣ ಶ್ಯಾಮ್ ಸುಂದರ್ ಆಂಧ್ರಪ್ರದೇಶದ ಅನಂತಪುರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
 ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು 2014 ಜೂನ್‌ನಲ್ಲಿ ಧೋನಿ ಮತ್ತು ಬ್ಯುಸಿನೆಡ್ ಟುಡೆ ಸಂಪಾದಕ ಚೈತನ್ಯ ಕಲ್ಬಾಗ್ ವಿರುದ್ಧ ಹಾಜರಾಗಲು ವಾರೆಂಟ್ ಹೊರಡಿಸಿತ್ತು. ಬ್ಯುಸಿನೆಸ್ ಟುಡೆ ಪರ ವಕೀಲರೊಬ್ಬರು ನ್ಯಾಯಾಲಯಕ್ಕೆ ಹಾಜರಾಗಿ ದ್ದರು.
2015ರಲ್ಲಿ ಈ ಪ್ರಕರಣವನ್ನು ಹೆಚ್ಚುವರಿ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಕಳೆದ ನವೆಂಬರ್‌ನಲ್ಲಿ ಧೋನಿ ಮತ್ತು ಕಲ್ಬಾಗ್ ಅವರಿಗೆ ಹಾಜರಾಗಲು ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ಧೋನಿ ಗೈರು ಹಾಜರಾಗಿದ್ದರು.
 


.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News