ಇಂದು ನಾಲ್ಕನೆ ಏಕದಿನ ಪಂದ್ಯ ;ಸರಣಿಯಲ್ಲಿ ಪ್ರತಿಷ್ಠೆ ಉಳಿಸಲು ಧೋನಿ ಪಡೆ ಪಣ

Update: 2016-01-19 17:42 GMT

ಕ್ಯಾನ್‌ಬೆರ್ರಾ, ಜ.19: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯ ವಿರುದ್ಧ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಬೌಲಿಂಗ್ ವೈಫಲ್ಯದಿಂದಾಗಿ ಸರಣಿಯನ್ನು ಕಳೆದುಕೊಂಡಿದೆ. ವೈಟ್‌ವಾಷ್ ತಪ್ಪಿಸಲು ಸರಣಿಯಲ್ಲಿ ಇನ್ನುಳಿದಿರುವ ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ. ನಾಲ್ಕನೆ ಪಂದ್ಯ ಬುಧವಾರ ನಡೆಯಲಿದೆ.
ಆಸ್ಟ್ರೇಲಿಯ ತಂಡವನ್ನು ಅದರ ತವರು ನೆಲದಲ್ಲಿ ಕಟ್ಟಿ ಹಾಕುವುದು ಕಷ್ಟ. ಟೀಮ್ ಇಂಡಿಯಾ ಮೂರು ಪಂದ್ಯಗಳಲ್ಲೂ 295ಕ್ಕೂ ಅಧಿಕ ರನ್ ಸೇರಿಸಿ, ಕಠಿಣ ಸವಾಲನ್ನು ವಿಧಿಸಿದ್ದರೂ, ಆಸ್ಟ್ರೇಲಿಯದ ಗೆಲುವಿಗೆ ಸಮಸ್ಯೆಯಾಗಲಿಲ್ಲ. ಅದು ಐದು ಪಂದ್ಯಗಳ ಸರಣಿಯಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಭಾರತ ಮಾನುಕಾ ಓವಲ್‌ನಲ್ಲಿ ಹಲವು ವರ್ಷಗಳ ಬಳಿಕ ಎರಡನೆ ಬಾರಿ ಆಡುತ್ತಿದೆ. ಆಸ್ಟ್ರೇಲಿಯ ಮತ್ತು ಭಾರತ ಮೊದಲ ಬಾರಿ ಇಲ್ಲಿ ಮುಖಾಮುಖಿಯಾಗಿದೆ. 2007-08ರಲ್ಲಿ ತ್ರಿಕೋನ ಸಿಬಿ ಸರಣಿಯಲ್ಲಿ ಭಾರತ ತಂಡ ಶ್ರೀಲಂಕಾವನ್ನು ಎದುರಿಸಿತ್ತು. ಆದರೆ ಈ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು.
 ಹಿಂದೆ ಆಡಿರುವ ತಂಡಕ್ಕೂ ಈಗಿನ ತಂಡಕ್ಕೂ ಭಾರೀ ವ್ಯತ್ಯಾಸ ಇದೆ. ಆಗಿನ ತಂಡದಲ್ಲಿ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರಂತಹ ಆಟಗಾರರು ಇದ್ದರು. ಅವರ್ಯಾರು ಈಗಿನ ತಂಡದಲ್ಲಿ ಇಲ್ಲ. ನಾಯಕ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮ ಮತ್ತು ಇಶಾಂತ್ ಶರ್ಮ ಈ ಕ್ರೀಡಾಂಗಣದಲ್ಲಿ ಆಡಿದ ಅನುಭವ ಹೊಂದಿದ್ಧಾರೆ.
ರೋಹಿತ್ ಮತ್ತು ಇಶಾಂತ್ ಶರ್ಮ 2007-08ರಲ್ಲಿ ಮೊದಲ ಬಾರಿ ಆಸ್ಟ್ರೇಲಿಯ ಪ್ರವೇಶಿಸಿದ್ದರು. ಎಂಟು ವರ್ಷಗಳ ಬಳಿಕ ಅವರ ಆಟದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಯುವ ಆಟಗಾರರಾದ ಮನೀಷ್ ಪಾಂಡೆ, ಗುರುಕೀರತ್ ಮಾನ್ ಮತ್ತು ರಿಶಿ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ಧಾರೆ.
ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ತಂಡದ ಸ್ಟಾರ್ ಆಟಗಾರರಾಗಿ ಮಿಂಚುತ್ತಿದ್ದಾರೆ. ಅವರು ತಂಡದ ಪ್ರತಿಷ್ಠೆಗಾಗಿ ಹೋರಾಟವನ್ನು ಮುಂದುವರಿಸಲಿದ್ದಾರೆ.
ಮೊದಲ ಎರಡು ಪಂದ್ಯಗಳಲ್ಲಿ ಭಾರತ ಪ್ರಥಮ ಆದ್ಯತೆಯಲ್ಲಿ ಅಂತಿಮ ಹನ್ನೊಂದರ ಬಳಗವನ್ನು ಆಯ್ಕೆ ಮಾಡಿತ್ತು. ಆದರೆ ಅದು ನಿರೀಕ್ಷಿತ ಫಲ ನೀಡಲಿಲ್ಲ. ಮೆಲ್ಬೊರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯಕ್ಕೆ ತಂಡದಲ್ಲಿ ಎರಡು ಬದಲಾವಣೆ ಮಾಡಿತ್ತು.
ಶಿಖರ್ ಧವನ್ ಮೆಲ್ಬೋರ್ನ್‌ನಲ್ಲಿ ಸರಣಿಯಲ್ಲೇ ಮೊದಲ ಅರ್ಧಶತಕ ದಾಖಲಿಸಿದ್ದಾರೆ. ಅವರು ಆಡಿರುವ ಕಳೆದ ಎಂಟು ಏಕದಿನ ಪಂದ್ಯಗಳಲ್ಲಿ ಇದು ಮೊದಲ ಅರ್ಧಶತಕವಾಗಿದೆ. ನಾಲ್ಕನೆ ಪಂದ್ಯಕ್ಕೆ ಗುರುಕೀರತ್ ಮತ್ತು ಪಾಂಡೆ ನಡುವೆ ಅವಕಾಶಕ್ಕಾಗಿ ಸ್ಪರ್ಧೆ ಏರ್ಪಟ್ಟಿದೆ.
 ಅಶ್ವಿನ್ ಮರಳಿ ಕಣಕ್ಕೆ: ಅಂತಿಮ ಪಂದ್ಯಕ್ಕೆ ನಾಯಕ ಧೋನಿ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲು ಯೋಚಿಸುತ್ತಿದ್ದಾರೆ. ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಂಡಕ್ಕೆ ವಾಪಸಾಗುವುದನ್ನು ನಿರೀಕ್ಷಿಸಲಾಗಿದೆ. ಸ್ಟಾರ್ ವೇಗಿ ಮುಹಮ್ಮದ್ ಶಮಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಭಾರತ ವೇಗದ ಬೌಲಿಂಗ್‌ನಿಂದ ಸಮಸ್ಯೆ ಎದುರಿಸುತ್ತಿದೆ. ಅನನುಭವಿಗಳನ್ನು ಕಟ್ಟಿಕೊಂಡು ಭಾರತ ಕೈ ಸುಟ್ಟುಕೊಂಡಿದೆ.
 ಆಸ್ಟ್ರೇಲಿಯವು ಭಾರತದ ವಿರುದ್ಧ 5-0 ಗೆಲುವಿನ ಯೋಜನೆ ಹೊಂದಿದೆ.ತಂಡಕ್ಕೆ ಡೇವಿಡ್ ವಾರ್ನರ್ ಮರಳಲಿದ್ಧಾರೆ.
  ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಗುರುಕೀರತ್ ಸಿಂಗ್/ಮನೀಷ್ ಪಾಂಡೆ, ರವೀಂದ್ರ ಜಡೇಜ, ಆರ್.ಅಶ್ವಿನ್, ಉಮೇಶ್ ಯಾದವ್, ಬರೀಂದರ್ ಸ್ರಾನ್, ಇಶಾಂತ್ ಶರ್ಮ/ಅಕ್ಷರ್ ಪಟೇಲ್/ರಿಶಿ ಧವನ್.
ಆಸ್ಟ್ರೇಲಿಯ: ಸ್ಟೀವನ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಆ್ಯರೊನ್ ಫಿಂಚ್, ಜಾರ್ಜ್ ಬೈಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಜೇಮ್ಸ್ ಫಾಕ್ನರ್, ಸ್ಕಾಟ್ ಬೊಲೆಂಡ್, ಜೋಶ್ ಹೇಝಲ್‌ವುಡ್, ಜೋಲ್ ಪ್ಯಾರಿಸ್.
ಪಂದ್ಯದ ಸಮಯ: ಬೆಳಗ್ಗೆ 8:50ಕ್ಕೆ ಆರಂಭ.
,,,,,,,,,,,,,
ಹೈಲೈಟ್ಸ್
 * ಭಾರತ ತಂಡ ಆಸ್ಟ್ರೇಲಿಯವನ್ನು ಅದರ ನೆಲದಲ್ಲಿ ಫೆಬ್ರವರಿ 2012ರಲ್ಲಿ ಮಣಿಸಿತ್ತು.
*ಆಸ್ಟ್ರೇಲಿಯದಲ್ಲಿ 2011-12ರಿಂದ ಈ ತನಕ ಆಸ್ಟ್ರೇಲಿಯ ವಿರುದ್ಧ ಆಡಿದ 9 ಪಂದ್ಯಗಳಲ್ಲಿ ಸೋತಿದೆ. 2 ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ.
*ಗ್ಲೆನ್ ಮ್ಯಾಕ್ಸ್‌ವೆಲ್ 4 ಬಾರಿ 90ಕ್ಕಿಂತ ಹೆಚ್ಚು ರನ್ ಗಳಿಸಿ ಶತಕದಂಚಿನಲ್ಲಿ ಎಡವಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News