ಭಾರತ-ಆಸ್ಟ್ರೇಲಿಯ ಏಕದಿನ: ಹೆಲ್ಮೆಟ್ ಧರಿಸಿದ ಅಂಪೈರ್ ಜಾನ್ ವಾರ್ಡ್!
ಹೊಸದಿಲ್ಲಿ, ಜ.20: ಆಸ್ಟ್ರೇಲಿಯ ಹಾಗೂ ಭಾರತದ ನಡುವೆ ಬುಧವಾರ ಇಲ್ಲಿ ನಡೆದ ನಾಲ್ಕನೆ ಏಕದಿನ ಪಂದ್ಯದಲ್ಲಿ ಅಂಪೈರ್ ಜಾನ್ ವಾರ್ಡ್ ಹೆಲ್ಮೆಟ್ ಧರಿಸಿ ಕಾರ್ಯನಿರ್ವಹಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂಪೈರ್ ಹೆಲ್ಮೆಟ್ ಧರಿಸಿದ್ದು ಇದೇ ಮೊದಲು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತದಲ್ಲಿ ನಡೆದಿದ್ದ ತಮಿಳುನಾಡು ಹಾಗೂ ಪಂಜಾಬ್ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ 53ರ ಹರೆಯದ ಜಾನ್ ವಾರ್ಡ್‌ಗೆ ಚೆಂಡೊಂದು ತಲೆಗೆ ಅಪ್ಪಳಿಸಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರು ಅಪಾಯವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಏಕದಿನ ಪಂದ್ಯದಲ್ಲಿ ಹೆಲ್ಮೆಟ್ ಧರಿಸಿ ಕಾರ್ಯನಿರ್ವಹಿಸಲು ನಿರ್ಧರಿಸಿದರು. ನಾನ್‌ಸ್ಟ್ರೆಕ್‌ನಲ್ಲಿ ಹೆಲ್ಮೆಟ್ ಧರಿಸಿ ನಿಂತಿದ್ದ ವಾರ್ಡ್ ಎಲ್ಲರ ಗಮನ ಸೆಳೆದರು.
ತಮಿಳುನಾಡಿನ ದಿಂಡಿಗಲ್‌ನಲ್ಲಿ ನಡೆದಿದ್ದ ರಣಜಿ ಟ್ರೋಫಿ ಪಂದ್ಯದ ವೇಳೆ ಪ್ರಸ್ತುತ ಆಸ್ಟ್ರೇಲಿಯ ಪ್ರವಾಸದಲ್ಲಿರುವ ಭಾರತದ ಆಲ್‌ರೌಂಡರ್ ಬಿರೇಂದರ್ ಸ್ರಾನ್ ಬಾರಿಸಿದ ಚೆಂಡೊಂದು ವಾರ್ಡ್ ತಲೆಗೆ ಅಪ್ಪಳಿಸಿತ್ತು. ಕೂಡಲೇ ಅವರನ್ನು ಮದುರೈ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿತ್ತು.
2014ರಲ್ಲಿ ಆಸ್ಟ್ರೇಲಿಯದ ದಾಂಡಿಗ ಫಿಲಿಪ್ ಹ್ಯೂಸ್ ಚೆಂಡಿನ ಹೊಡೆತದಿಂದ ಅಕಾಲಿಕ ಸಾವನ್ನಪ್ಪಿದ ಬಳಿಕ ಎಲ್ಲ ಪಂದ್ಯದ ವೇಳೆ ಆಟಗಾರರ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿದೆ. ಪಂದ್ಯದ ವೇಳೆ ಅಂಪೈರ್‌ಗಳಿಗೂ ಚೆಂಡು ತಗಲುವ ಸಾಧ್ಯತೆಗಳೂ ಅಕವಿದೆ.
ನವೆಂಬರ್ 2014ರಲ್ಲಿ ಇಸ್ರೇಲ್‌ನ ತಂಡದ ಮಾಜಿ ನಾಯಕ ಹಾಗೂ ಅಂಪೈರ್ ಹಿಲ್ಲೆಲ್ ಅವಾಸ್ಕರ್ ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೇ ಕ್ರಿಕೆಟ್ ಚೆಂಡು ತಗಲಿ ಸಾವನ್ನಪ್ಪಿದ್ದರು.
ಇತ್ತೀಚೆಗೆ ಕೇರಳ ಹಾಗೂ ರೈಲ್ವೇಸ್ ನಡುವೆ ನಡೆದಿದ್ದ ವಿಜಯ್ ಹಝಾರೆ ಟ್ರೋಫಿಯ ವೇಳೆ ಭಾರತದ ಅಂಪೈರ್ ಪಸ್ಚಿಮ್ ಪಾಠಕ್ ಹೆಲ್ಮೆಟ್ ಧರಿಸಿ ಗಮನ ಸೆಳೆದಿದ್ದರು. ಮುಂಬರುವ ದಿನಗಳಲ್ಲಿ ಮೈದಾನದೊಳಗೆ ಅಂಪೈರ್‌ಗಳು ಹೆಲ್ಮೆಟ್ ಧರಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ಕಳೆದ ವರ್ಷ ಆಸ್ಟ್ರೇಲಿಯದ ಮಾಜಿ ಅಂಪೈರ್ ಸೈಮನ್ ಟಫಲ್ ಅಭಿಪ್ರಾಯಪಟ್ಟಿದ್ದರು. ಅದೀಗ ನಿಜವಾಗುತ್ತಿದೆ.