×
Ad

ರಹಾನೆಗೆ ಗಾಯ, ಟ್ವೆಂಟಿ-20 ಸರಣಿಗೆ ಡೌಟ್

Update: 2016-01-20 19:17 IST

ಕ್ಯಾನ್‌ಬೆರ್ರಾ, ಜ.20: ಭಾರತದ ಪರ ಏಕದಿನ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದ ಅಗ್ರ ಕ್ರಮಾಂಕದ ದಾಂಡಿಗ ಅಜಿಂಕ್ಯ ರಹಾನೆಗೆ ಆಸ್ಟ್ರೇಲಿಯ ವಿರುದ್ಧದ ನಾಲ್ಕನೆ ಏಕದಿನ ಪಂದ್ಯದ ವೇಳೆ ಕೈಗೆ ಗಾಯವಾಗಿದ್ದು, ಜ.26 ರಿಂದ ಆರಂಭವಾಗಲಿರುವ ಟ್ವೆಂಟಿ-20 ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ಫೀಲ್ಡಿಂಗ್‌ನ ವೇಳೆ ಬಲಕೈಗೆ ಗಾಯ ಮಾಡಿಕೊಂಡಿರುವ ರಹಾನೆಗೆ ನಾಲ್ಕು ಹೊಲಿಗೆ ಹಾಕಲಾಗಿದೆ. ನಾಲ್ಕನೆ ಕ್ರಮಾಂಕದ ದಾಂಡಿಗ ರಹಾನೆ ಮೆಲ್ಬೋರ್ನ್ ಹಾಗೂ ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 50 ಹಾಗೂ 89 ರನ್ ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಭಾರತದ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದರು.

 ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 349 ರನ್ ಗುರಿ ಪಡೆದಿದ್ದ ಭಾರತ ರಹಾನೆ ಗಾಯಗೊಂಡಿರುವ ಕಾರಣ ಕೇವಲ 25 ರನ್‌ನಿಂದ ಸೋತಿದೆ.

ರಹಾನೆ ನಾಲ್ಕನೆ ಕ್ರಮಾಂಕದ ಬದಲಿಗೆ 7ನೆ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು 3 ಎಸೆತಗಳಲ್ಲಿ 2 ರನ್ ಗಳಿಸಿ ರಿಚರ್ಡ್‌ಸನ್‌ಗೆ ವಿಕೆಟ್ ಒಪ್ಪಿಸಿದ್ದರು.

ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 0-4 ರಿಂದ ಹಿನ್ನಡೆಯಲ್ಲಿರುವ ಭಾರತ ತಂಡ ಐಸಿಸಿ ರ್ಯಾಂಕಿಂಗ್‌ನಲ್ಲಿ ಎರಡನೆ ಸ್ಥಾನವನ್ನು ಉಳಿಸಿಕೊಳ್ಳಲು ಕನಿಷ್ಠ ಒಂದು ಪಂದ್ಯವನ್ನಾದರೂ ಗೆಲ್ಲಲೇಬೇಕಾಗಿದೆ. ಫಾರ್ಮ್‌ನಲ್ಲಿರುವ ಆಟಗಾರ ರಹಾನೆ ಗಾಯಗೊಂಡಿರುವುದು ಧೋನಿ ಪಡೆಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.

............

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News