ಜೊಕೊವಿಕ್, ಫೆಡರರ್ ಮೂರನೆ ಸುತ್ತಿಗೆ ತೇರ್ಗಡೆ

Update: 2016-01-20 18:12 GMT

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ

ಮೆಲ್ಬೋರ್ನ್, ಜ.20: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್, ಸ್ವಿಸ್ ಆಟಗಾರ ರೋಜರ್ ಫೆಡರರ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೆ ಸುತ್ತಿಗೆ ತಲುಪಿದ್ದಾರೆ.

ಬುಧವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಸರ್ಬಿಯದ ಜೊಕೊವಿಕ್ ಫ್ರಾನ್ಸ್‌ನ ಯುವ ಆಟಗಾರ ಕ್ವಿಂಟಿನ್ ಹಾಲಿಸ್‌ರನ್ನು 6-1, 6-2, 7-6(3) ಸೆಟ್‌ಗಳ ಅಂತರದಿಂದ ಮಣಿಸಿದರು. 19ರ ಹರೆಯದ ಕ್ವಿಂಟನ್ 3ನೆ ಸೆಟ್‌ನಲ್ಲಿ ಪ್ರತಿರೋಧ ನೀಡುವ ಮೂಲಕ ಜೊಕೊವಿಕ್‌ಗೆ ಒತ್ತಡ ಹೇರಿದ್ದರು.

17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಫೆಡರರ್ ಅವರು 35ನೆ ರ್ಯಾಂಕಿನ ಉಕ್ರೇನ್‌ನ ಅಲೆಕ್ಸಾಂಡರ್ ಡಾಲ್ಗೊಪಾಲೊವ್ ವಿರುದ್ಧ 6-3, 7-5, 6-1 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು.

ಐದನೆ ಆಸ್ಟ್ರೇಲಿಯನ್ ಓಪನ್ ಟ್ರೋಫಿಯ ಮೇಲೆ ಕಣ್ಣಿಟ್ಟಿರುವ 34ರ ಹರೆಯದ ಫೆಡರರ್ ಗ್ರಾನ್‌ಸ್ಲಾಮ್ ಟೂರ್ನಿಯ ಸಿಂಗಲ್ಸ್‌ನಲ್ಲಿ 299ನೆ ಗೆಲುವು ದಾಖಲಿಸಿದರು.

2014ರ ಅಮೆರಿಕನ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದ ಜಪಾನ್ ಆಟಗಾರ ಕೀ ನಿಶಿಕೊರಿ ಆಸ್ಟಿನ್ ಕ್ರಾಜಿಸೆಕ್‌ರನ್ನು 6-3, 7-6(5), 6-3 ಸೆಟ್‌ಗಳ ಅಂತರದಿಂದ ಮಣಿಸಿ ಮೂರನೆ ಸುತ್ತಿಗೆ ತಲುಪಿದ್ದಾರೆ.

ಸೆರೆನಾ, ಶರಪೋವಾ ಮೂರನೆ ಸುತ್ತಿಗೆ ಲಗ್ಗೆ:

 ಮಹಿಳೆಯರ ಸಿಂಗಲ್ಸ್‌ನಲ್ಲಿ ಅಮೆರಿಕದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಹಾಗೂ ರಶ್ಯದ ಆಟಗಾರ್ತಿ ಮರಿಯಾ ಶರಪೋವಾ ಮೂರನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಬುಧವಾರ ನಡೆದ 2ನೆ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಸೆರೆನಾ ಶ್ರೇಯಾಂಕರಹಿತ ತೈವಾನ್ಞ್‌ನ ಸೀ-ಸೂ-ವೀ ಅವರನ್ನು 6-1, 6-2 ನೇರ ಸೆಟ್‌ಗಳಿಂದ ಮಣಿಸಿದ್ದಾರೆ.

 ಆಸ್ಟ್ರೇಲಿಯನ್ ಓಪನ್‌ನಲ್ಲಿ 22ನೆ ಗ್ರಾನ್‌ಸ್ಲಾಮ್ ಟ್ರೋಫಿಯನ್ನು ಜಯಿಸಿ ಟೆನಿಸ್ ದಂತಕತೆ ಸ್ಟೆಫಿ ಗ್ರಾಫ್ ದಾಖಲೆಯನ್ನು ಮುರಿಯಲು ಎದುರು ನೋಡುತ್ತಿರುವ ಸೆರೆನಾ ತೈವಾನ್ ಆಟಗಾರ್ತಿಯ ವಿರುದ್ಧ ಸುಲಭ ಗೆಲುವು ಸಾಧಿಸಿದ್ದಾರೆ.

  2008ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಶರಪೋವಾ ಮಳೆಬಾಧಿತ ಪಂದ್ಯದಲ್ಲಿ ಅಲಿಯಾಕ್‌ಸಾಂಡ್ರ ಸಾಸ್‌ನೊವಿಕ್‌ರನ್ನು 6-2, 6-1 ಸೆಟ್‌ಗಳ ಅಂತರದಿಂದ ಸೋಲಿಸಿ 3ನೆ ಸುತ್ತಿಗೆ ತಲುಪಿದರು.

ಕ್ವಿಟೋವಾ ಔಟ್: ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಎರಡನೆ ಸುತ್ತಿನ ಪಂದ್ಯದಲ್ಲಿ 21ರ ಹರೆಯದ ಆಸ್ಟ್ರೇಲಿಯದ ಆಟಗಾರ್ತಿ ಡಾರಿಯಾ ಗಾರ್ವಿಲೋವಾ ವಿರುದ್ಧ 6-4, 6-4 ಸೆಟ್‌ಗಳ ಅಂತರದಿಂದ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ. 4 ವರ್ಷಗಳ ಹಿಂದೆ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದ 6ನೆ ಶ್ರೇಯಾಂಕದ ಝೆಕ್ ಆಟಗಾರ್ತಿ ಕ್ವಿಟೋವಾ 85 ನಿಮಿಷಗಳ ಹೋರಾಟದಲ್ಲಿ 35 ಬಾರಿ ಅನಗತ್ಯ ತಪ್ಪೆಸಗಿದ್ದಾರೆ.

ಭೂಪತಿಗೆ ಜಯ, ಪೇಸ್‌ಗೆ ಸೋಲು

 ಭಾರತದ ಹಿರಿಯ ಆಟಗಾರ ಮಹೇಶ್ ಭೂಪತಿ ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸುವ ಮೂಲಕ ಗ್ರಾನ್‌ಸ್ಲಾಮ್ ಟೂರ್ನಿಗೆ ವಾಪಸಾಗಿದ್ದಾರೆ. ಆದರೆ, ಭಾರತದ ಇನ್ನೋರ್ವ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಮೊದಲ ತಡೆ ದಾಟಲು ವಿಫಲರಾಗಿದ್ದಾರೆ.

ಬುಧವಾರ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ ಲಕ್ಸಂಬರ್ಗ್‌ನ ಗಿಲ್ಲೆಸ್ ಮುಲ್ಲರ್‌ರೊಂದಿಗೆ ಆಡಿದ ಭೂಪತಿ ಆಸ್ಟ್ರೇಲಿಯದ ಜೋಡಿ ಅಲೆಕ್ಸ್ ಬೋಲ್ಟ್ ಹಾಗೂ ಆಂಡ್ರೂ ವಿಟ್ಟಿಂಗ್ಟನ್‌ರನ್ನು 7-6(4), 3-6, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

2015ರ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಬೇಗನೆ ನಿರ್ಗಮಿಸಿದ ಬಳಿಕ ಭೂಪತಿ ಸತತ ಮೂರನೆ ಟೂರ್ನಿಯಲ್ಲಿ ಭಾಗವಹಿಸಿದರು. ಚೆನ್ನೈ ಓಪನ್ ಹಾಗೂ ಥಾಯ್ಲೆಂಡ್ ಚಾಲೆಂಜರ್ ಟೂರ್ನಿಯಲ್ಲಿ ಪೂರವ್ ರಾಜಾರೊಂದಿಗೆ ಆಡಿದ್ದ ಭೂಪತಿ ಸೆಮಿಫೈನಲ್‌ಗೆ ತಲುಪಿದ್ದರು.

42ರ ಹರೆಯದ ಪೇಸ್ ಫ್ರಾನ್ಸ್‌ನ ಜೊತೆಗಾರ ಜೆರೆಮಿ ಚಾರ್ಡಿ ಅವರೊಂದಿಗೆ ಮೊದಲ ಸುತ್ತಿನ ಪಂದ್ಯವನ್ನು ಆಡಿದರು. ಆದರೆ, ಕೊಲಂಬಿಯಾದ ಜುಯಾನ್ ಸೆಬಾಸ್ಟಿಯನ್ ಕಾಬಲ್ ಹಾಗೂ ರಾಬರ್ಟ್ ಫರ್ಹಾ ವಿರುದ್ಧ 3-6, 4-6 ಸೆಟ್‌ಗಳ ಅಂತರದಿಂದ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News