ಮಲೇಷ್ಯಾ ಮಾಸ್ಟರ್ಸ್: ಸಿಂಧು, ಶ್ರೀಕಾಂತ್ ಸೆಮಿಫೈನಲ್‌ಗೆ
ಪೆನಾಂಗ್(ಮಲೇಷ್ಯಾ), ಜ.21: ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಭಾರತದ ಪಿ.ವಿ ಸಿಂಧು ಮತ್ತು ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಕೆ.ಶ್ರೀಕಾಂತ್ ಸೆಮಿಫೈನಲ್ ತಲುಪಿದ್ದಾರೆ.
ಇದೇ ವೇಳೆ ಮಹಿಳೆಯರ ಡಬಲ್ಸ್ ಜೋಡಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನ್ ಪೊನ್ನಪ್ಪ ಎರಡನೆ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.
ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚು ಜಯಿಸಿದ್ದ ಸಿಂಧು ಅವರು ಇಂದು ನಡೆದ ಕಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಕಾವೊರಿ ಇಮಾಬೆಪ್ಪು ವಿರುದ್ಧ 21-13, 13-21, 21-14 ಅಂತರದಿಂದ ಜಯ ಗಳಿಸಿ ಸೆಮಿಫೈನಲ್‌ಗೆ ತೇರ್ಗಡೆಯಾದರು.
ಈ ಗೆಲುವಿನೊಂದಿಗೆ ಸಿಂಧು ಜಪಾನ್‌ನ ಆಟಗಾರ್ತಿ ವಿರುದ್ಧ ಸತತ ಮೂರು ಪಂದ್ಯಗಳಲ್ಲಿ ಜಯಿಸಿದ ಸಾಧನೆ ಮಾಡಿದರು. 2012ರಲ್ಲಿ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಮತ್ತು 2013ರಲ್ಲಿ ಜಪಾನ್ ಓಪನ್‌ನಲ್ಲಿ ಸಿಂಧು ಅವರು ಇಮಾಬೆಪ್ಪು ವಿರುದ್ಧ ಜಯಗಳಿಸಿದ್ದರು.
ಇಂಡಿಯಾ ಸೂಪರ್ ಸಿರೀಸ್ ಮತ್ತು ಕಳೆದ ವರ್ಷ ಸ್ವಿಸ್ ಓಪನ್ ಚಾಂಪಿಯನ್ ಎನಿಸಿಕೊಂಡಿದ್ದ ಎರಡನೆ ಶ್ರೇಯಾಂಕದ ಕೆ.ಶ್ರೀಕಾಂತ್ ಅವರು 16ನೆ ಶ್ರೇಯಾಂಕದ ಥಾಯ್ಲೆಂಡ್‌ನ ಬೊನ್ಸಾಕ್ ಪೊನ್ಸನಾ ವಿರುದ್ಧ 21-17, 21-10 ಅಂತರದಲ್ಲಿ ಜಯ ಗಳಿಸಿದರು. 10ನೆ ಶ್ರೇಯಾಂಕದ ಅಜಯ್ ಜಯರಾಮ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಅವರು ಮಲೇಷ್ಯಾದ ಝುಲ್ಫಾದ್ಲಿ ಝುಲ್ಕಿಫ್ಫ್‌ಲಿ ವಿರುದ್ಧ 11-21, 21-8, 22-20 ಅಂತರದಲ್ಲಿ ಗೆಲುವಿನ ನಗೆ ಬೀರಿದರು.
ಮುಂದಿನ ಪಂದ್ಯದಲ್ಲಿ ಜಯರಾಮ್ ಅವರು ಅಗ್ರ ಶ್ರೇಯಾಂಕದ ಮಲೇಷ್ಯಾದ ಲಿ ಚಾಂಗ್ ವೀ ಮತ್ತು ಸಿಂಗಾಪುರದ ಝಿ ಲಿಯಾಂಗ್ ಡೆೆರೆಕ್ ವಾಂಗ್ ಇವರ ನಡುವೆ ನಡೆಯುವ ಎರಡನೆ ಸುತ್ತಿನ ಪಂದ್ಯದಲ್ಲಿ ವಿಜೇತರೊಂದಿಗೆ ಸೆಣಸಾಡಲಿದ್ದಾರೆ.
ಜ್ವಾಲಾ -ಅಶ್ವಿನ್‌ಗೆ ಎರಡನೆ ಸುತ್ತಿನಲ್ಲಿ ಸೋಲು:ಮಹಿಳೆಯರ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನ್ ಪೊನ್ನಪ್ಪ ಅವರು ಎರಡನೆ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಶಿಝುಕಾ ಮಾಟ್‌ಸುವೊ ಮತ್ತು ಮಾಮಿ ನೈಟೊ ವಿರುದ್ಧ ಕೇವಲ 37 ನಿಮಿಷಗಳ ಸೆಣಸಾಟದಲ್ಲಿ ಶರಣಾದರು.