ಫೆಬ್ರವರಿಯಲ್ಲಿ ಭಾರತ-ಶ್ರೀಲಂಕಾ ಟ್ವೆಂಟಿ-20 ಸರಣಿ
ಹೊಸದಿಲ್ಲಿ, ಜ.21: ಭಾರತ ಹಾಗೂ ಶ್ರೀಲಂಕಾ ತಂಡಗಳು ಫೆಬ್ರವರಿಯಲ್ಲಿ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಡಲಿವೆ. ಈ ಸರಣಿಯು ಏಷ್ಯಾಕಪ್ ಹಾಗೂ ಐಸಿಸಿ ಟ್ವೆಂಟಿ-20 ವಿಶ್ವಕಪ್ ತಯಾರಿಗೆ ಪೂರ್ವಾಭ್ಯಾಸವಾಗಿದೆ.
ಫೆ.9(ಪುಣೆ), ಫೆ.12(ದಿಲ್ಲಿ) ಹಾಗೂ ಫೆ.14(ವಿಶಾಖಪಟ್ಟಣ)ರಂದು ಭಾರತವು ಶ್ರೀಲಂಕಾದ ವಿರುದ್ಧ ಟ್ವೆಂಟಿ-20 ಪಂದ್ಯಗಳನ್ನು ಆಡಲಿದೆ ಎಂದು ಮೂಲಗಳು ತಿಳಿಸಿವೆ. ಶ್ರೀಲಂಕಾ ಹಾಗೂ ಭಾರತ 2014ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಕೊನೆಯ ಬಾರಿ ಟ್ವೆಂಟಿ-20 ಪಂದ್ಯವನ್ನು ಆಡಿದ್ದವು. ಫೈನಲ್‌ನಲ್ಲಿ ಶ್ರೀಲಂಕಾ ತಂಡವು ಧೋನಿ ಪಡೆಯನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿತ್ತು.
ಶ್ರೀಲಂಕಾ ಇತ್ತೀಚೆಗೆ ನ್ಯೂಝಿಲೆಂಡ್ ಪ್ರವಾಸದ ವೇಳೆ ಟ್ವೆಂಟಿ-20 ಸರಣಿಯನ್ನು 2-0 ಅಂತರದಿಂದ ಸೋತಿತ್ತು. ಮುಂಬರುವ ಭಾರತ-ಶ್ರೀಲಂಕಾ ನಡುವಿನ ಸರಣಿಯು ಫೆ.24 ರಿಂದ ಮಾ.6ರ ತನಕ ಬಾಂಗ್ಲಾದೇಶದಲ್ಲಿ ನಡೆಯುವ ಏಷ್ಯಾಕಪ್ ಹಾಗೂ ಮಾರ್ಚ್-ಎಪ್ರಿಲ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ಗೆ ಪೂರ್ವ ತಯಾರಿಯಾಗಿದೆ.