×
Ad

ಸಿಡ್ನಿ ಥಂಡರ್ ಫೈನಲ್‌ಗೆ ಉಸ್ಮಾನ್ ಖ್ವಾಜಾ ಆಕರ್ಷಕ ಶತಕ

Update: 2016-01-21 22:58 IST

ಬಿಗ್‌ಬ್ಯಾಶ್ ಟೂರ್ನಿ 

ಮೆಲ್ಬೋರ್ನ್, ಜ.21: ಉಸ್ಮಾನ್ ಖ್ವಾಜಾ ಬಾರಿಸಿದ ಮತ್ತೊಂದು ಶತಕದ ನೆರವಿನಿಂದ ಸಿಡ್ನಿ ಥಂಡರ್ ತಂಡ ಬಿಗ್‌ಬ್ಯಾಶ್ ಲೀಗ್‌ನಲ್ಲಿ(ಬಿಬಿಎಲ್) ಫೈನಲ್‌ಗೆ ಲಗ್ಗೆ ಇಟ್ಟಿದೆ.

ಗುರುವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಸಿಡ್ನಿ ತಂಡ ಅಡಿಲೇಡ್ ಸ್ಟ್ರೈಕರ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಫೈನಲ್‌ಗೆ ತಲುಪಿತು. ಗೆಲ್ಲಲು 160 ರನ್ ಗುರಿ ಪಡೆದಿದ್ದ ಸಿಡ್ನಿ ತಂಡ ಉಸ್ಮಾನ್ ಖ್ವಾಜಾರ ಆಕರ್ಷಕ ಶತಕ(ಔಟಾಗದೆ 104, 59 ಎಸೆತ, 13 ಬೌಂಡರಿ, 3 ಸಿಕ್ಸರ್) ನೆರವಿನಿಂದ 17.4 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು.

ಮೊದಲು ಬ್ಯಾಟಿಂಗ್ ಆಯ್ದುಕೊಂಡ ಅಡಿಲೇಡ್ ತಂಡ 3ನೆ ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಶೇನ್ ವ್ಯಾಟ್ಸನ್(2-28) ಹಾಗೂ ಕ್ಲಿಂಟ್ ಮೆಕೆ(3-44)ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಕಾಡಿದರು. ಅಲೆಕ್ಸ್ ರಾಸ್(47 ರನ್), ಮೈಕಲ್ ನೆಸ್ಸರ್(27) ಹಾಗೂ ಆದಿಲ್ ರಶೀದ್(14) ನೆರವಿನಿಂದ ಅಡಿಲೇಡ್ 20 ಓವರ್‌ಗಳಲ್ಲಿ 7 ವಿಕೆಟ್‌ನಷ್ಟಕ್ಕೆ 159 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ಸಿಡ್ನಿ ತಂಡ ಆರಂಭದಲ್ಲೇ ಪ್ರತಿ ಓವರ್‌ಗೆ 10 ರನ್ ಗಳಿಸಿ ಉತ್ತಮ ಆರಂಭ ಪಡೆಯಿತು. ಎಡಗೈ ದಾಂಡಿಗ ಖ್ವಾಜಾ(ಔಟಾಗದೆ 104) ಟೂರ್ನಿಯಲ್ಲಿ ಎರಡನೆ ಶತಕ ಸಿಡಿಸುವ ಮೂಲಕ ಸಿಡ್ನಿಯ ಗೆಲುವನ್ನು ಸುಲಭವಾಗಿಸಿದರು. ಖ್ವಾಜಾ ಕಳೆದ ವರ್ಷ ಮೆಲ್ಬೋರ್ನ್ ತಂಡದ ವಿರುದ್ಧ ಔಟಾಗದೆ 109 ರನ್ ಗಳಿಸಿದ್ದರು.

ಖ್ವಾಜಾ ಇದೇ ರೀತಿಯ ಸ್ಥಿರ ಪ್ರದರ್ಶನ ನೀಡಿದರೆ ಸ್ಟಾರ್ ಆಟಗಾರರನ್ನು ಒಳಗೊಂಡಿರುವ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News