×
Ad

ಆಸ್ಟ್ರೇಲಿಯನ್ ಓಪನ್: ಸಾನಿಯಾ-ಮಾರ್ಟಿನಾ ಗೆಲುವಿನ ಓಟ ಅಬಾಧಿತ

Update: 2016-01-21 23:02 IST

ಮೆಲ್ಬೋರ್ನ್, ಜ.21: ಭಾರತದ ಟೆನಿಸ್ ಸ್ಟಾರ್ ಸಾನಿಯಾ ಮಿರ್ಝಾ ಅವರು ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅಜೇಯ ಗೆಲುವಿನ ಓಟ ಮುಂದುವರಿಸಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಅವರು ರೋಮಾನಿಯದ ಫ್ಲಾರಿನ್ ಮರ್ಗಿಯೊರೊಂದಿಗೆ ನೇರ ಸೆಟ್‌ಗಳಿಂದ ಗೆಲುವು ದಾಖಲಿಸಿ ಎರಡನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಗುರುವಾರ ನಡೆದ ಮಹಿಳೆಯರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ ಹಾಗೂ ಮಾರ್ಟಿನಾ ಜೋಡಿ ಮರಿಯಾನಾ ಡಕ್ಯೂ-ಮರಿನೊ ಹಾಗೂ ಟೆಲಿಯಾನಾ ಪೆರೇರಾರನ್ನು 6-2, 6-3 ಸೆಟ್‌ಗಳ ಅಂತರದಿಂದ ಮಣಿಸಿತು. ಈ ಗೆಲುವಿನೊಂದಿಗೆ ಅಜೇಯ ಗೆಲುವಿನ ಓಟವನ್ನು 31ಕ್ಕೆ ವಿಸ್ತರಿಸಿದರು.

70 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಇಂಡೋ-ಸ್ವಿಸ್ ಜೋಡಿ ಕೊಲಂಬಿಯಾ-ಬ್ರೆಝಿಲ್ ಆಟಗಾರ್ತಿಯರನ್ನು ಸುಲಭವಾಗಿ ಸೋಲಿಸಿದೆ. ಸಾನಿಯಾ ಹಾಗೂ ಮಾರ್ಟಿನಾ ಮುಂದಿನ ಸುತ್ತಿನಲ್ಲಿ ಉಕ್ರೇನ್‌ನ ಅವಳಿ ಸಹೋದರಿಯರಾದ ನಾಡಿಯಾ ಕಿಚೆನೊಕ್ ಹಾಗೂ ಲುಡ್ಮೈಲಾ ಕಿಚೆನೊಕ್‌ರನ್ನು ಎದುರಿಸಲಿದ್ದಾರೆ.

ಪುರುಷರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ರೊಮಾನಿಯದ ಮರ್ಗಿಯಾರೊಂದಿಗೆ ಕಣಕ್ಕಿಳಿದ ಬೋಪಣ್ಣ ಆಸ್ಟ್ರೇಲಿಯದ ಒಮರ್ ಜಸಿಕಾ ಹಾಗೂ ನಿಕ್ ಕಿರ್ಗಿಯೊಸ್‌ರನ್ನು 7-5, 6-3 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

 ನಾಲ್ಕನೆ ಶ್ರೇಯಾಂಕದ ಬೋಪಣ್ಣ-ಮರ್ಗಿಯಾ ಮುಂದಿನ ಸುತ್ತಿನಲ್ಲಿ ಲುಕಾಸ್ ಡ್ಲೌಫಿ ಹಾಗೂ ಜಿರಿ ವೆಸ್ಲೆ ಅವರನ್ನು ಎದುರಿಸಲಿದ್ದಾರೆ.

ಭಾರತದ ಹಿರಿಯ ಆಟಗಾರ ಮಹೇಶ್ ಭೂಪತಿ ಅವರು ಗಿಲ್ಲೆಸ್ ಮುಲ್ಲರ್‌ರೊಂದಿಗೆ ಪುರುಷರ ಡಬಲ್ಸ್‌ನಲ್ಲಿ ಈಗಾಗಲೇ ಎರಡನೆ ಸುತ್ತು ತಲುಪಿದ್ದಾರೆ. ಆದರೆ, ಇನ್ನೋರ್ವ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಫ್ರೆಂಚ್‌ನ ಜೊತೆಗಾರ ಜೆರೆಮಿ ಚಾರ್ಡಿಯೊಂದಿಗೆ ಆಡಿ ಮೊದಲ ಸುತ್ತಿನಲ್ಲೇ ಸೋತಿದ್ದಾರೆ.

ವಿಕ್ಟೋರಿಯಾ, ಮುಗುರುಝ, ಇವಾನೊವಿಕ್‌ಗೆ ವಿಕ್ಟರಿ

ಮೆಲ್ಬೋರ್ನ್, ಜ.21: ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಕ್ಟೋರಿಯಾ ಅಝರೆಂಕಾ, ಗಾರ್ಬೈನ್ ಮುಗುರುಝ ಹಾಗೂ ಅನಾ ಇವಾನೊವಿಕ್ ಮೂರನೆ ಸುತ್ತಿಗೆ ಪ್ರವೇಶಿಸಿದ್ದಾರೆ.

 ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಆಸ್ಟ್ರೇಲಿಯನ್ ಓಪನ್‌ಗೆ ತಯಾರಿ ನಡೆಸಿದ್ದ ಅಝರೆಂಕಾ ಎರಡನೆ ಸುತ್ತಿನ ಪಂದ್ಯದಲ್ಲಿ ಮಾಂಟೆನೆಗ್ರೊದ ಡಾಂಕಾ ಕಾವಿನಿಕ್‌ರನ್ನು 6-1, 6-2 ಸೆಟ್‌ಗಳ ಅಂತರದಿಂದ ಸೋಲಿಸಿದರು.

ಕಳೆದ ಎರಡು ವರ್ಷಗಳಿಂದ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಬೆಲಾರಸ್‌ನ ವಿಕ್ಟೋರಿಯಾ ಮುಂದಿನ ಸುತ್ತಿನಲ್ಲಿ ಯುವ ಆಟಗಾರ್ತಿ ನಾಯೊಮಿ ಒಸಾಕಾರನ್ನು ಎದುರಿಸಲಿದ್ದಾರೆ.

ಸ್ಪೇನ್‌ನ ಮೂರನೆ ಶ್ರೇಯಾಂಕದ ಮುಗುರುಝ ಅವರು ಕಿರ್ಸ್ಟನ್ ಫ್ಲಿಪ್‌ಕೆನ್ಸ್‌ರನ್ನು 6-4, 6-2 ಸೆಟ್‌ಗಳ ಅಂತರದಿಂದ ಮಣಿಸಿ 3ನೆ ಸುತ್ತಿಗೆ ಪ್ರವೇಶಿಸಿದ್ದಾರೆ.

ಮಾಜಿ ಫ್ರೆಂಚ್ ಓಪನ್ ಚಾಂಪಿಯನ್ ಅನಾ ಇವಾನೊವಿಕ್ ಗಾಯದ ಸಮಸ್ಯೆಯ ನಡುವೆಯೂ ಮೂರನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಗುರುವಾರ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ ಸರ್ಬಿಯದ ಇವಾನೊವಿಕ್ ಅವರು ಅನಸ್ಟಸಿಜಾ ಸೆವಾಸ್ಟೋವಾರನ್ನು 6-3, 6-3 ಸೆಟ್‌ಗಳ ಅಂತರದಿಂದ ಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News